ಕೋಲಾರ: ಅಂಗನವಾಡಿ ಕಾಯಕರ್ತೆಯೊಬ್ಬರು ಹೆಣ್ಣು ಮಗುವಿಗೆ ಅಲ್ಲಲ್ಲಿ ಬೆಂಕಿಯಿಟ್ಟು (ಬರೆ ಹಾಕಿದಂತೆ) ವಿಕೃತಿ ಮೆರೆದಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಹೌದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಸಹಾಯಕಿ ಶ್ರೀದೇವಿ ಎನ್ನುವ ಮಹಿಳೆ ರಾಕ್ಷಸಿಯ ವರ್ತನೆ ತೋರಿದ್ದು, 4 ವರ್ಷದ ಪುಟ್ಟ ಮಗುವಿಗೆ ಬೆಂಕಿಯಿಂದ ಸುಟ್ಟಿದ್ದಾರೆ.
ನಿಡಘಟ್ಟ ಗ್ರಾಮದ ನಿವಾಸಿ ಮುನಿರಾಜು ಹಾಗೂ ಮುನಿಯಮ್ಮ ಎಂಬ ದಂಪತಿಗೆ ಸೇರಿರುವ ಹೆಣ್ಣು ಮಗುವಿನ ಕೈ, ಕುತ್ತಿಗೆ ಹಾಗೂ ಎದೆಗೆ ಬೆಂಕಿಯಿಂದ ಸುಟ್ಟು ವಿಕೃತಿ ಮೇರೆದಿದ್ದಾರೆ. ಅಂಗನವಾಡಿಯಲ್ಲಿ ಮಗು ಗಲಾಟೆ ಮಾಡುತ್ತೆ ಎಂದು ಶ್ರೀದೇವಿ ಬೆಂಕಿಯಿಂದ ಸುಟ್ಟಿದ್ದಾರೆ ಎನ್ನಲಾಗಿದೆ.
ಭಯದಲ್ಲಿ ಪೋಷಕರು:
ಸದ್ಯ ಮಗುವನ್ನು ಅಂಗನವಾಡಿಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ಈ ಸಂಬಂಧ ಪಾಲಕರು ದೂರು ನೀಡಿದರು ಸಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಶಾಲೆಯೂ ಬೇಡ, ಏನೂ ಬೇಡ ಅಂತ ಭಯಪಟ್ಟು ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದು ಎರಡನೇ ಬಾರಿ:
ಈ ಹಿಂದೆಯೂ ಇದೆ ಹೆಣ್ಣು ಮಗುವಿಗೆ ಬೆಂಕಿಯಿಂದ ಸುಟ್ಟಿದ್ದ ಶ್ರೀದೇವಿ, ಅಡುಗೆ ಮಾಡುವಾಗ ಬೆಂಕಿ ತಗುಲಿರಬಹುದು ಎಂದು ಕಾರಣ ಹೇಳಿ ತಪ್ಪಿಸಿಕೊಂಡಿದ್ದರು. ಈಗ ಎರಡನೇ ಬಾರಿಗೆ ರಾಕ್ಷಸಿ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.