ಭಾರತದಲ್ಲಿ ಕ್ರೀಡೆಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅದರಲ್ಲೂ ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಬ್ಯಾಡ್ಮಿಂಟನ್ ಮತ್ತು ಹಾಕಿ ಕ್ರೀಡೆಗಳು ಅತ್ಯಂತ ಜನಪ್ರಿಯತೆ ಗಳಿಸಿವೆ. ಈ ಎಲ್ಲಾ ಕ್ರೀಡೆಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ.
ದೇಶದಲ್ಲಿ ಕ್ರೀಡೆಯ ಸಂಪ್ರದಾಯವನ್ನು ಆಚರಿಸಲು ಮತ್ತು ಭಾರತೀಯ ಕ್ರೀಡೆಗಳ ದಿಗ್ಗಜರಿಗೆ ಗೌರವ ಸಲ್ಲಿಸಲು ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ವಿಶೇಷವೆಂದರೆ ಆಗಸ್ಟ್ 29, ಹಾಕಿ ದಂತಕಥೆ ಮೇಜರ್ ಧ್ಯಾನಚಂದ್ ಅವರ ಜನ್ಮ ದಿನ ಕೂಡ ಹೌದು. ಇಂದು ಧ್ಯಾನಚಂದ್ ಅವರ 119ನೇ ಜನ್ಮದಿನವಾಗಿದೆ.
ಧ್ಯಾನ್ “ಚಂದ್” ಆಗಿದ್ದೇಗೆ? ಮೇಜರ್ ಧ್ಯಾನ್ ಚಂದ್ ಅವರು 29 ಆಗಸ್ಟ್ 1905 ರಂದು ಅಹಮದಾಬಾದ್‌ನ ರಜಪೂತ ಕುಟುಂಬದಲ್ಲಿ ಜನಿಸಿದರು. ತಂದೆ ಸಮೇಶ್ವರ್ ಸಿಂಗ್ ಅವರಂತೆಯೇ, ಅವರು ಭಾರತೀಯ ಸೇನೆಗೆ ಸೇರಿದ್ದರು. ಅಲ್ಲಿ ಅವರು ಹಾಕಿ ಕ್ರೀಡೆ ಪ್ರೀತಿಯಲ್ಲಿ ಸಿಲುಕಿಕೊಂಡಿದ್ದರು.
ಶ್ರೇಷ್ಠ ಭಾರತೀಯ ಹಾಕಿ ಆಟಗಾರನ ಮೂಲ ಹೆಸರು ಧ್ಯಾನ್ ಸಿಂಗ್, ಆದರೆ ಅವರು ಬೆಳದಿಂಗಳ ರಾತ್ರಿಗಳಲ್ಲಿ ಮಾತ್ರ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ತಂಡದ ಸಹ ಆಟಗಾರರು ಅವರಿಗೆ “ಧ್ಯಾನ್ ಚಂದ್” ಎಂದು ಮರುನಾಮಕರಣ ಮಾಡಿದ್ದರು.
ಸಾಧನೆಗಳೇನು? ಧಾನ್ಯ ಚಂದ್ ಅವರ 22 ವರ್ಷಗಳ ವೃತ್ತಿಜೀವನದಲ್ಲಿ ಅವರು 400 ಗೋಲುಗಳನ್ನು ಗಳಿಸಿದ್ದರು. ಅಲ್ಲದೆ ಭಾರತ ಮೂರು ಒಲಿಂಪಿಕ್ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2002ರಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನವದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಯಿತು.
ಭಾರತೀಯ ಹಾಕಿಗೆ ನೀಡಿದ ಕೊಡುಗೆಗಾಗಿ ಧ್ಯಾನ್ ಚಂದ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಹಾಕಿಗೆ ನಿವೃತ್ತಿ ಘೋಷಿಸಿದ ಬಳಿಕ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಮುಖ್ಯ ಕೋಚ್ ಆಗಿದ್ದರು. ಈಗ ಕೇಂದ್ರ ಸರ್ಕಾರ ಅವರ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡೆ ಕ್ಷೇತ್ರದಲ್ಲಿ ಸಾಧನೆ ಗೈದ ಆಟಗಾರರಿಗೆ “ಖೇಲ್ ರತ್ನ” ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಏಕೆ ಆಚರಿಸಲಾಗುತ್ತದೆ? ಭಾರತದಲ್ಲಿ ಮೇಜರ್ ಧ್ಯಾನಚಂದ್ ಅವರ ಜೀವನ ಮತ್ತು ಕೊಡುಗೆಯನ್ನು ಸ್ಮರಿಸಲು ಮತ್ತು ಅವರ ಕೊಡುಗೆಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಕ್ಕಳು ಮತ್ತು ಯುವಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೆ, ಮೇಜರ್ ಧ್ಯಾನ್ ಚಂದ್ ಬಗ್ಗೆ ಸಾಧನೆಗಳ ಬಗ್ಗೆ ತಿಳಿಸಲಾಗುತ್ತದೆ.
ಆಚರಿಸುವುದು ಹೇಗೆ? ದೇಶದೆಲ್ಲೆಡೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಮತ್ತು ಕಾರ್ಮಿಕ ಸಚಿವ ಮನ್ಸುಖ್ ಮಾದವಿಯಾ ಅವರು ಕರೆ ನೀಡಿದ್ದಾರೆ. ದೇಶದ ಜನರು ಕನಿಷ್ಠ ಒಂದು ಗಂಟೆಗಳ ಕಾಲ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕೋರಿದ್ದಾರೆ. ಇದರೊಂದಿಗೆ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಕ್ರೀಡಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ “ಫಿಟ್ ಇಂಡಿಯಾ” ಆಂದೋಲನದಲ್ಲಿ ಜನರು ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಫಿಟ್ ಇಂಡಿಯಾ ಆಂದೋಲನ ಪ್ರಧಾನಿ ನರೇಂದ್ರ ಮೋದಿ ಅವರು 2019ರ ರಾಷ್ಟ್ರೀಯ ಕ್ರೀಡಾ ದಿನದಂದು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ “ಫಿಟ್ ಇಂಡಿಯಾ” ಆಂದೋಲನವನ್ನು ಪ್ರಾರಂಭಿಸಿದ್ದರು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವುದು ಈ ಆಂದೋಲನದ ಉದ್ದೇಶವಾಗಿದೆ. ಈ ಆಂದೋಲನವು ಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳನ್ನು ಸೇರಿಸಲು ಪ್ರೋತ್ಸಾಹಿಸಲಿದೆ. ವಿಶೇಷ ಫಿಟ್‌ನೆಸ್ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ವಿವಿಧ ಸಂಸ್ಥೆಗಳು ಈ ದಿನವನ್ನು ಆಚರಿಸುತ್ತವೆ.