ಜೈಪುರ: ಇಲ್ಲಿನ ಎಲಿವೇಟೆಡ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಲು ಯತ್ನಿಸಿದ ಪ್ರಯಾಣಿಕರಿಗೆ ಭಯ ಹುಟ್ಟಿಸುವಂತೆ ಕಾರು ಬೆಂಕಿಯೊಂದಿಗೇ ಮುಂದೆ ಸಾಗಿರುವ ವಿಚಿತ್ರ ಘಟನೆ ನಡೆದಿದೆ.
ಚಾಲಕ ಜಿತೇಂದ್ರ ಜಂಗಿದ್ ಎನ್ನುವವರು ಚಲಾಯಿಸುತ್ತಿದ್ದ ಕಾರು, ಸೋಡಾಲಾ ಪ್ರದೇಶದ ಎತ್ತರದ ರಸ್ತೆಯ ಬಳಿ ಬರುತ್ತಿದ್ದಂತೆ ಬಾನೆಟ್ನಿಂದ ಹೊಗೆ ಹೊರಹೊಮ್ಮುವುದನ್ನು ಗಮನಿಸಿದ್ದಾರೆ. ತಕ್ಷಣ ಕಾರನ್ನು ನಿಲ್ಲಿಸಿದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ನಂದಿಸಲು ಇತರ ವಾಹನಗಳ ಸವಾರರು ಪ್ರಯತ್ನಿಸುತ್ತಿದ್ದ ಬೆಂಕಿಯೊಂದಿಗೇ ಕಾರು ರಸ್ತೆಯಲ್ಲಿ ಮುಂದೆ ಸಾಗಿ, ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಕೊನೆಗೆ ಡಿವೈಡರ್ಗೆ ಡಿಕ್ಕಿಯಾಗಿ ಕಾರು ನಿಂತಿದೆ. ಇದರಿಂದ ವಾಹನ ಸವಾರರು ಆತಂಕಗೊಂಡರು.
ಅಸಲಿಗೆ ಕಾರು ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಬ್ರೇಕ್ ಫೇಲಾಗಿರುವ ಕಾರಣ ರಸ್ತೆ ಇಳಿಜಾರಿನಲ್ಲಿ ಮುಂದೆ ಸಾಗಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ಕಾರು ರಸ್ತೆಯಲ್ಲಿ ಸಾಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಭೂತ ಕಾರನ್ನು ಚಲಾಯಿಸುತ್ತಿದೆ ಎಂದೆಲ್ಲ ಹರಿದಾಡಿದೆ.