ನವದೆಹಲಿ: ಆಯುರ್ವೇದ ವೈದ್ಯ ಪದ್ಧತಿಯ ಪಿತಾಮಹ ಎನ್ನಿಸಿಕೊಂಡಿರುವ ಧನ್ವಂತರಿ ಜಯಂತಿ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು 70 ವರ್ಷ ಮೇಲ್ಪಟ್ಟ ವೃದ್ಧರಿಗೆ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ ಹಾಗೂ ₹12,850 ಕೋಟಿ ಮೌಲ್ಯದ ಆರೋಗ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇನ್ನು ಪ್ರತ್ಯೇಕ ಕಾರ್ಯಕ್ರಮವೊಂದರಲ್ಲಿ ರೋಜಗಾರ್ ಮೇಳದ ಅಂಗವಾಗಿ 51 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ. ಇದೇ ವೇಳೆ ಕರ್ನಾಟಕದ 1 ಕ್ರಿಟಿಕಲ್ ಕೇರ್ ಬ್ಲಾಕ್ ಸೇರಿ ದೇಶದ 21 ಕ್ರಿಟಿಕಲ್ ಕೇರ್ ಬ್ಲಾಕ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉಚಿತ ಆರೋಗ್ಯ ವಿಮೆ:
ಕಳೆದ ತಿಂಗಳು, ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ವಿಮೆಯ ಪ್ರಮುಖ ವಿಸ್ತರಣೆಯನ್ನು ಅನುಮೋದಿಸಿತ್ತು. ಇದು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ ₹5 ಲಕ್ಷದವರೆಗೆ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸುತ್ತದೆ. ಕುಟುಂಬದ ಸಮೂಹ ಆರೋಗ್ಯ ವಿಮೆ ಹೊರತಾಗಿ 6 ಕೋಟಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ₹5 ಲಕ್ಷ ವಿಮಾ ಸೌಲಭ್ಯ ಇದರಿಂದ ಸಿಗಲಿದೆ.
ಪೋರ್ಟಲ್‌ಗೂ ಚಾಲನೆ:
ಇದೇ ವೇಳೆ ಎಲ್ಲ ಲಸಿಕಾಕರಣಗಳನ್ನು ಒಂದೇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಲ್ಲ ಯು-ವಿನ್ ಪೋರ್ಟಲ್‌ಗೂ ಅವರು ಚಾಲನೆ ನೀಡಲಿದ್ದಾರೆ.
ಇದರ ಹೊರತಾಗಿ ಅವರು ದಿಲ್ಲಿಯಲ್ಲಿರುವ ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ 2ನೇ ಹಂತವನ್ನು ಹಾಗೂ ಮಧ್ಯಪ್ರದೇಶದ 3 ಹೊಸ ಮೆಡಿಕಲ್ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ.
ಇನ್ನು ಪಟನಾ, ಬಿಲಾಸ್‌ಪುರ, ಕಲ್ಯಾಣಿ, ನವದೆಹಲಿ, ಗೋರಖಪುರ ಹಾಗೂ ಭೋಪಾಲ್ ಏಮ್ಸ್‌ನಲ್ಲಿನ ವಿಸ್ತರಿತ ಸೇವೆಗಳಿಗೂ ಚಾಲನೆ ನೀಡಲಿದ್ದಾರೆ.