ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ ₹700 ಕೋಟಿ ಲೂಟಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದಲ್ಲಿ ಇತ್ತೀಚೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಮದ್ಯ ಮಾರಾಟಗಾರರು ಮಾಡಿರುವ ಲಂಚದ ಆರೋಪವನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ ಆ ರಾಜ್ಯವು ಪಕ್ಷದ ‘ಶಾಹಿ ಪರಿವಾರ’ದ (ಗಾಂಧಿ ಪರಿವಾರದ) ಎಟಿಎಂ ಆಗುತ್ತದೆ. ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮದ್ಯದ ವ್ಯವಹಾರದಿಂದ 700 ಕೋಟಿ ರು.ಗಳಷ್ಟು ಸುಲಿಗೆ ಮಾಡಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದು ನಡೆದಿದೆ. ಈ ರಾಜ್ಯಗಳು ಶಾಹಿ ಪರಿವಾರದ ಎಟಿಎಂಗಳಾಗುತ್ತಿವೆ ಎಂದು ಕಿಡಿಕಾರಿದರು.
‘ಚುನಾವಣೆ ಗೆಲ್ಲಲು ಕಾಂಗ್ರೆಸ್ ಇಷ್ಟೊಂದು ಭ್ರಷ್ಟಾಚಾರ ನಡೆಸಿದೆ ಎಂದಾದರೆ, ಒಮ್ಮೆ ಅಧಿಕಾರಕ್ಕೆ ಬಂದರೆ ಎಷ್ಟು ಭ್ರಷ್ಟಾಚಾರ ಮಾಡುತ್ತದೆ ಎಂದು ನೀವೇ ಊಹಿಸಬಹುದು’ ಎಂದ ಮೋದಿ, ಮಹಾರಾಷ್ಟ್ರದಲ್ಲಿ ಈ ಭ್ರಷ್ಟಾಚಾರ ಪುನಾರಾರ್ತನೆ ಆಗಬಾರದು ಎಂದರೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
‘ಮಹಾರಾಷ್ಟ್ರದಲ್ಲಿ ನಮ್ಮ ಮಹಾಯುತಿ ಕೂಟವು ಮಹಿಳೆಯರ ಭದ್ರತೆ, ಉದ್ಯೋಗಾವಕಾಶ, ಲಡ್ಕಿ ಬಹಿನ್ ಯೋಜನೆ ವಿಸ್ತರಣೆ ಮೇಲೆ ನಿಗಾ ವಹಿಸಲಿದೆ. ಆದರೆ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಒಳಗೊಂಡ ಮಹಾ ವಿಕಾಸ್ ಅಘಾಡಿ ಹಗರಣಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ’ ಎಂದು ಎಚ್ಚರಿಸಿದರು.