ಬೆಂಗಳೂರು:- ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಏರಿಕೆ ಆಗುವ ಸಾಧ್ಯತೆ ಇದೆ.
ದರ ಏರಿಕೆ ಮಾಡುವಂತೆ ಸಾರಿಗೆ ಸಚಿವರಿಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಒತ್ತಾಯ ಮಾಡಿದೆ. ಸರ್ಕಾರ ಹಿಂದಿನ ದರಕ್ಕಿಂತ ನಾಲ್ಕರಷ್ಟು ಹೆಚ್ಚು ಪಡೆಯಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ಕೆಲಸಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಸರ್ಕಾರ ದರ ಏರಿಕೆ ಮಾಡಬೇಕೆಂದು ಎಮಿಷನ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಯೋಗೀಶ್ ಮನವಿ ಮಾಡಿದ್ದಾರೆ. ಯಾವುದೇ ವಾಹನವಾದರೂ ಪ್ರತಿ ಆರು ತಿಂಗಳು, ವರ್ಷಕ್ಕೆ ಒಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. ರಾಜ್ಯದಲ್ಲಿ ಒಟ್ಟು ಮೂರು ಕೋಟಿಗೂ ಹೆಚ್ಚು ವಾಹನಗಳಿವೆ.
ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲವಾದರೆ ಟ್ರಾಫಿಕ್ ಪೋಲಿಸರು 500 ರೂ.ನಿಂದ 1000 ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲಾಂದರೆ ಆರ್ಟಿಓ ಅಧಿಕಾರಿಗಳು ವಾಹನಗಳಿಗೆ ಎಫ್ಸಿ ಮಾಡುವುದಿಲ್ಲ. ಎಮಿಷನ್ ಟೆಸ್ಟ್ ವರದಿ ಇಲ್ಲ ಅಂದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ಸದ್ಯ ಒಂದು ಬೈಕ್ ಎಮಿಷನ್ ಟೆಸ್ಟ್ ಮಾಡಲು 65 ರುಪಾಯಿ ತೆಗೆದುಕೊಳ್ಳುತ್ತಾರೆ. ಇದನ್ನು 110 ರುಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ತ್ರಿಚಕ್ರ ವಾಹನಗಳಿಗೆ (ಆಟೋ, ಗೂಡ್ಸ್ ಆಟೋ) ಸದ್ಯ 75 ರೂಪಾಯಿ ಇದ್ದು, 100 ರುಪಾಯಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳ ಎಮಿಷನ್ ಟೆಸ್ಟ್ಗೆ ಪ್ರಸ್ತುತ 115 ರೂಪಾಯಿ ಇದ್ದು, 200 ರೂಪಾಯಿ ಮಾಡುವಂತೆ ಕೋರಲಾಗಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳಿಗೆ (ಲಾರಿ, ಬಸ್ ಹಾಗೂ ಟ್ರಕ್) ಸದ್ಯ 160 ರೂಪಾಯಿ 250ಕ್ಕೆ ಏರಿಕೆ ಮಾಡಬೇಕು ಎಂದು ವಿನಂತಿಸಲಾಗಿದೆ.