ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರತಿವರ್ಷ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ನ.25, 26ರಂದು ನಡೆಯಲಿದ್ದು, ಇದೇ ಮೊದಲ ಬಾರಿಗೆ ಮಳಿಗೆಗಳಿಂದ ಯಾವುದೇ ಶುಲ್ಕ ಪಡೆಯದಿರಲು ನಿರ್ಧರಿಸಲಾಗಿದೆ.
ಶನಿವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಪರಿಷೆಯ ಪೂರ್ವಭಾವಿ ಸಭೆಯಲ್ಲಿ ಪರಿಷೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿಗೆ ಟೆಂಡರ್ ವ್ಯವಸ್ಥೆ ಇದೆ. ಆದರೆ, ಕಳೆದ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಗುತ್ತಿಗೆದಾರರು ವ್ಯಾಪಾರಿಗಳಿಂದ ಬಲವಂತವಾಗಿ ಹೆಚ್ಚಿನ ಹಣ ವಸೂಲಿ ಮಾಡಿದ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಈ ಬಾರಿ ಸುಂಕ ವಸೂಲಾತಿಗೆ ಟೆಂಡರ್ ಕೈಬಿಡಬೇಕು, ಜತೆಗೆ ಮಳಿಗೆಗಳಿಂದ, ಮಕ್ಕಳ ಆಟಿಕೆಯವರಿಂದ ಸುಂಕ ವಸೂಲಿ ಮಾಡುವುದು ಬೇಡ. ಬಲವಂತವಾಗಿ ಯಾರಾದರೂ ವಸೂಲಿ ಮಾಡಿದ್ದು ತಿಳಿದರೆ ಪೊಲೀಸ್ ಇಲಾಖೆ ಮೂಲಕ ಕ್ರಮ ವಹಿಸುವಂತೆ ಸೂಚಿಸಿದರು.
ಲಕ್ಷಾಂತರ ಜನರು ಪರಿಷೆಯ ದಿನ ದೇವರ ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನೂಕುನುಗ್ಗಲು ಆಗದಂತೆ ಕ್ರಮವಹಿಸಲು ದೊಡ್ಡಗಣಪತಿ ದೇವಸ್ಥಾನದ ಎದುರಿಂದ ಬೇಡರ ಕಣ್ಣಪ್ಪ ದೇವಸ್ಥಾನದವರೆಗೆ ಪ್ರವೇಶಿಸಲು ಹಾಗೂ ನಿರ್ಗಮಿಸಲು ಪ್ರತ್ಯೇಕ ಬ್ಯಾರಿಕೇಡ್ ಹಾಕಬೇಕು. ದೊಡ್ಡಬಸವಣ್ಣ ದೇವಸ್ಥಾನದ ಒಳಗಿನವರೆಗೂ ಇದೇ ರೀತಿ ಬ್ಯಾರಿಕೇಡ್ ಹಾಕಬೇಕೆಂದು ತಿಳಿಸಿದರು. ಜನರು ಸುಗಮವಾಗಿ ಓಡಾಡಲು ಬುಲ್ ಟೆಂಪಲ್ ರಸ್ತೆಯಿಂದ ರಾಮಕೃಷ್ಣ ಆಶ್ರಮದವರೆಗೆ ಹಾಗೂ ಗೋಖಲೆ ಇನ್‌ಸ್ಟಿಟ್ಯೂಟ್‌ವರೆಗಿನ ರಸ್ತೆ ಮಧ್ಯ ಬ್ಯಾರಿಕೇಡ್ ಅಳವಡಿಸಬೇಕು. ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಐದು ದಿನಗಳವರೆಗೆ ವಿಸ್ತರಿಸಬೇಕು ಎಂದರು.
ಸಿ.ಸಿ.ಕ್ಯಾಮೆರಾ ಅಳವಡಿಕೆ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಬಿಬಿಎಂಪಿಯಿಂದ ಮಾರ್ಷಲ್‌ಗಳ ನಿಯೋಜನೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ರಾಮಕೃಷ್ಣ ಆಶ್ರಮದಿಂದ ಹನುಮಂತನಗರ, ಕತ್ರಿಗುಪ್ಪೆ, ಬ್ಯಾಂಕ್ ಕಾಲೋನಿ, ಗಿರಿನಗರ, ಆವಲಹಳ್ಳಿ, ವಿದ್ಯಾಪೀಠ ಸರ್ಕಲ್ ಮತ್ತಿತರ ಸ್ಥಳಗಳಿಗೆ ತೆರಳುವ ಬಸ್ ಮಾರ್ಗ ಬದಲಿಸಬೇಕು. ಜನರಿಗೆ ಕುಡಿಯುವ ನೀರು, ಶೌಚಾಲಯ, ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಸಚಿವರು ತಿಳಿಸಿದರು.ಸ್ವಚ್ಛತೆ ಕಾಪಾಡಲು ‘ಪರಿಷೆಗೆ ಬನ್ನಿ, ಕೈಚೀಲ ತನ್ನಿ’ ಎನ್ನುವ ಘೋಷಣೆಯಡಿ ಪ್ರಚಾರ ಮಾಡುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ.