ವಾಷಿಂಗ್ಟನ್: ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುವುದು ಸಹಜ. ಆದರೆ, ಪಾಶ್ಚಾತ್ಯ ರಾಷ್ಟ್ರದಲ್ಲಿಯೂ ಹಿಂದುತ್ವದ ಮೇಲೆ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ.
ಹೌದು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ ಶುರುವಾಗಿದೆ. ಕಮಲಾ ಹ್ಯಾರಿಸ್ ಹಿಂದೂಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ ಹಾಗೂ ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದ್ದಾರೆ.
ದೀಪಾವಳಿ ಶುಭಾಶಯ ತಿಳಿಸುವ ವೇಳೆ ಮೊದಲ ಬಾರಿ ಟ್ರಂಪ್ ಬಾಂಗ್ಲಾ ಹಿಂದೂಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದಿರುವ ಟ್ರಂಪ್ ತಾವು ಗೆದ್ದರೆ ಭಾರತದ ಜತೆ ಮತ್ತಷ್ಟು ಬಾಂಧವ್ಯ ವೃದ್ಧಿಸುವೆ ಎಂದಿದ್ದಾರೆ.
‘ಬಾಂಗ್ಲಾದೇಶದಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರ ಮೇಲಾಗುತ್ತಿರುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ ನನ್ನ ಕಣ್ಗಾವಲಿನಲ್ಲಿದ್ದಿದ್ದರೆ ಇದು ಎಂದಿಗೂ ಇದು ಸಂಭವಿಸುತ್ತಿರಲಿಲ್ಲ’ ಎಂದಿದ್ದಾರೆ.
ಇನ್ನು ಇದೇ ವೇಳೆ ಟ್ರಂಪ್ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಮೇಲೆ ಕಿಡಿ ಕಾರಿದ್ದು ‘ಕಮಲಾ ಮತ್ತು ಜೋ ಅಮೆರಿಕ ಮತ್ತು ಪ್ರಪಂಚದಾದ್ಯಂತ ಹಿಂದೂಗಳನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದಿದ್ದಾರೆ.
ಹಿಂದೂಗಳಿಂದ ಸ್ವಾಗತ:
ಟ್ರಂಪ್ ಹೇಳಿಕೆಯನ್ನು ಅಮೆರಿಕದಲ್ಲಿನ ಹಿಂದೂ ಸಂಘಟನೆಗಳು ಸ್ವಾಗತಿಸಿದ್ದು, ಟ್ರಂಪ್ ನಿಜವಾಗಿಯೂ ಹಿಂದೂ ಸಂಘಟನೆಗಳ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದಿವೆ.