ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ ಹಣ್ಣಿನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳು ಸಹ ಇವೆ. ಸದ್ಯ ಮಾವಿನ ಹಣ್ಣಿನ ಸೀಸನ್ ಇರುವುದರಿಂದ ಈ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಸಾಮಾನ್ಯವಾಗಿ ನಾವು ಮಾವಿನ ಹಣ್ಣನ್ನು ತಿಂದು, ಕೊನೆಯಲ್ಲಿ ವಾಟೆಯನ್ನು ಬಿಸಾಡುತ್ತೇವೆ. ಆದರೆ, ಅದೇ ವಾಟೆಯಿಂದ ಅನೇಕ ಉಪಯೋಗಗಳಿವೆ.
ಅದರ ಬಗ್ಗೆ ಗೊತ್ತಾದರೆ ನೀವು ಎಂದಿಗೂ ವಾಟೆಯನ್ನು ಬಿಸಾಡುವುದೇ ಇಲ್ಲ. ಮಾವಿನ ಹಣ್ಣಿನಲ್ಲಿರುವ ಹಲವು ಪೋಷಕಾಂಶಗಳು ವಾಟೆಯಲ್ಲಿಯೂ ಇವೆ. ಕೊಲೆಸ್ಟ್ರಾಲ್ ಮತ್ತು ಅತಿಸಾರದಂತಹ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ವಾಟೆಗಳು ಹೊಂದಿವೆ. ಅಷ್ಟಕ್ಕೂ ಮಾವಿನ ವಾಟೆಯು ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನಾವೀಗ ವಿವರವಾಗಿ ತಿಳಿಯೋಣ. ಮಾವಿನಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಮಾವಿನ ವಾಟೆಯನ್ನು ಒಣಗಿಸಿ, ಪುಡಿ ಮಾಡಿ ಸೇವಿಸಿದರೆ ಆರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.
ಅದಲ್ಲದೆ, ಮಾವಿನ ವಾಟೆ ಭೇದಿ, ಅತಿಸಾರದಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಮಾವಿನ ಹಣ್ಣಿನ ತಿರುಳನ್ನು ಒಣಗಿಸಿ, ಪುಡಿ ಮಾಡಿ ಕರಿಮೆಣಸಿನೊಂದಿಗೆ ಬೆರೆಸಿ, ಸೇವಿಸಿದರೆ ಭೇದಿ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ಮಾವಿನ ವಾಟೆಯಲ್ಲಿ ವಿಟಮಿನ್ ಎ, ಸಿ, ಇ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ, ಫೋಲೇಟ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಅದರಲ್ಲಿ ಮ್ಯಾಂಜಿಫೆರಿನ್ ಕೂಡ ಇದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಮಾವಿನ ವಾಟೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ಜೀವಕೋಶಗಳನ್ನು ಕ್ಯಾನ್ಸರ್‌ನಂತಹ ಅಪಾಯಗಳಿಂದ ರಕ್ಷಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಿಷ್ಟೇ ಅಲ್ಲದೆ, ಹೃದಯದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಮಾವಿನ ವಾಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಮತ್ತೊಂದೆಡೆ, ಮುಖದ ಮೇಲಿನ ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಟೆಯ ಪುಡಿಯಲ್ಲಿ ಟೊಮ್ಯಾಟೋ ರಸವನ್ನು ಬೆರೆಸಿ ಸ್ಕ್ರಬ್ ಮಾಡುವುದರಿಂದ ತ್ವಚೆಯ ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮ ಕಾಂತಿಯುತವಾಗಿ ಕಾಣುತ್ತದೆ.