ವಾಷಿಂಗ್ಟನ್ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ಉದ್ಯಮಿ ಎಲಾನ್ ಮಸ್ಕ್ ಅವರನ್ನು ತಮ್ಮ ಸರ್ಕಾರದ ಭಾಗವಾಗಿ ಸೇರಿಸುವ ಸಾಧ್ಯತೆ ದಟ್ಟವಾಗಿದೆ.
ಹೌದು, ಟ್ರಂಪ್ ಅವರು ತಮ್ಮ ಕ್ಯಾಬಿನೆಟ್ ಹಾಗೂ ಆಪ್ತ ಸಲಹಾ ಮಂಡಳಿಯಲ್ಲಿ ಯಾರು ಇರಬೇಕು ಎಂಬ ಪಟ್ಟಿಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಟ್ರಂಪ್ ವಿರುದ್ಧ ಸ್ಪರ್ಧಿಸಲು ಯತ್ನಿಸಿ ಹಿಂದೆ ಸರಿದಿದ್ದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ಈ ಹಿಂದೆ ಸಚಿವೆ ಆಗಿದ್ದ ತುಳಸಿ ಗಬ್ಬಾರ್ಡ್ ಅವರು ಸಂಪುಟದಲ್ಲಿ ಸ್ಥಾನ ಪಡೆಯಬಹುದು. ಇದರ ಜತೆಗೆ ಟ್ರಂಪ್ ಗೆಲುವಿಗೆ ಶ್ರಮಿಸಿದ ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌ಗೂ ಯಾವುದಾದರೂ ಒಂದು ಸ್ಥಾನಮಾನ ದೊರಕಬಹುದು ಎಂದು ಮೂಲಗಳು ಹೇಳಿವೆ.
ವಿದೇಶಾಂಗ ಸಚಿವ ಹುದ್ದೆಗೆ ಸೆನೆಟರ್ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಗುಪ್ತಚರ ಮಾಜಿ ನಿರ್ದೇಶಕ ರಿಚರ್ಡ್ ಗ್ರೆನೆಲ್ ಅವರನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ಹೇಳಿವೆ.