ತುಂಗಭದ್ರಾ: ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19 ನೇ ಗೇಟನ್ನು ದುರಸ್ತಿ ಮಾಡಲು ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು “ನಮ್ಮ ತುಂಗಭದ್ರಾ ನೀರಾವರಿ ನಿಗಮದಲ್ಲಿಯೂ ಉತ್ತಮ ತಂತ್ರಜ್ಞರಿದ್ದಾರೆ. ಅಲ್ಲದೇ ಗುತ್ತಿಗೆದಾರ ಸಂಸ್ಥೆಗಳಾದ ಕೃಷ್ಣಯ್ಯ, ನಾರಾಯಣ ಹಾಗೂ ಹಿಂದುಸ್ಥಾನ್ ಸಂಸ್ಥೆಯ ತಂಡಗಳು ಈಗಾಗಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಂತ್ರಜ್ಞರಿಗೆ ಈಗಾಗಲೇ ಅಣೆಕಟ್ಟಿನ ವಿನ್ಯಾಸ ನಕ್ಷೆ ನೀಡಲಾಗಿದೆ” ಎಂದು ಹೇಳಿದರು.
“ಶನಿವಾರ ರಾತ್ರಿ ಜಲಾಶಯದ 10 ಗೇಟ್ ಗಳನ್ನು ತೆರೆಲಾಗಿತ್ತು. ಏಕಾಏಕಿ ಜಲಾಶಯದ 19 ನೇ ಗೇಟಿನ ಚೈನ್ ಲಿಂಕ್ ತುಂಡಾದ ಹಿನ್ನೆಲೆ ಎಲ್ಲಾ ಗೇಟ್ ತೆರೆದು ಅಣೆಕಟ್ಟಿನ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ” ಎಂದರು.
“ಸದ್ಯ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. 19 ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.