(Debit-Credit Card) ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ದಾರರಿಗೆ ಜಿಎಸ್‌ಟಿ ಮಂಡಳಿಯಿಂದ ಬಿಗ್ ಶಾಕ್ ಎದುರಾಗಿದ್ದು, ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿದೆ.
ಹೌದು, 54ನೇ GST ಮಂಡಳಿ ಸಭೆಯಲ್ಲಿ ಕಾರ್ಡ್ ಪೇಮೆಂಟ್ ಮೇಲೆ ಶೇಕಡ 18ರನ್ನು GST ವಿಧಿಸುವ ಬಗ್ಗೆ ಚರ್ಚೆ ನಡೆದಿದ್ದು, ಇದನ್ನು ಫಿಟೆಂಟ್ ಸಮಿತಿಗೆ ವಹಿಸಲಾಗಿದೆ. 2000 ರೂ.ಗಿಂತ ಕಡಿಮೆ ಬೆಲೆಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೆ ಶೇಕಡ 18ರಷ್ಟು GST ವಿಧಿಸಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಇದರಿಂದಾಗಿ ಕಾರ್ಡ್ ಪಾವತಿ ದುಬಾರಿಯಾಗುವ ಸಾಧ್ಯತೆ ಇದೆ.
GST ಮಂಡಳಿ ಮುಂದಿರುವ ಈ ಪ್ರಸ್ತಾವನೆ ಅನುಮೋದನೆಗೊಂಡಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾಡುವ ಪಾವತಿಗಳು ದುಬಾರಿಯಾಗುತ್ತೇವೆ. ಪಿಒಎಸ್ ಸಾಧನಗಳು, ಸ್ಕ್ಯಾನರ್ ಮುಂತಾದ ಪಾವತಿ ವಿಧಾನಗಳ ಮೂಲಕ ಕಾರ್ಡ್ ಪಾವತಿಗೆ ಅನುವು ಮಾಡಿಕೊಡುವ ಪೇಮೆಂಟ್ ಅಗ್ರಿಗೇಟರ್ ಸಂಸ್ಥೆಗಳಿಗೆ ಅವುಗಳು ಪಡೆಯುವ ಶುಲ್ಕದ ಮೇಲೆ ಶೇಕಡ 18ರಷ್ಟು GST ವಿಧಿಸಲು ಮಂಡಳಿ ಉದ್ದೇಶಿಸಿದೆ. ಪೇಮೆಂಟ್ ಅಗ್ರಿಗೇಟರ್ ಗಳು ಈ ತೆರಿಗೆ ಹೊರೆಯನ್ನು ಮಾರಾಟಗಾರರ ಮೂಲಕ ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುತ್ತವೆ. ಪ್ರಸ್ತುತ ಅಗ್ರಿಗೇಟರ್ ಗಳು ಪ್ರತಿ ವಹಿವಾಟಿಗೆ ಶೇಕಡ 0.5 ರಿಂದ ಶೇಕಡ 2 ರವರೆಗೆ ಶುಲ್ಕ ವಿಧಿಸುತ್ತಿದ್ದು, ಈ ಶುಲ್ಕಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಯುಪಿಐ ಮೂಲಕ ಮಾಡುವ ವಹಿವಾಟಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.