ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಗರದ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಅವರು ತಮ್ಮ ಬೆನ್ನುನೋವು / ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಬೆಂಗಳೂರು ಜೈಲಿಗೆ ಶಿಫ್ಟ್ ಆಗಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ದರ್ಶನ್ ಅವರ ಆರೋಗ್ಯ ಸ್ಥಿತಿ ಕುರಿತು ವರದಿ ನೀಡುವಂತೆ ದರ್ಶನ್ ಪರ ವಕೀಲರು ಬಳ್ಳಾರಿ ಕಾರಾಗೃಹದ ಅಧಿಕಾರಿಗಳಿಗೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಇತ್ತೀಚೆಗೆ ಬಿಮ್ಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆ ತಜ್ಞ ಡಾ.ವಿಶ್ವನಾಥ್ ಅವರು ಜೈಲಿನಲ್ಲಿಯೇ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಸಿಟಿ ಸ್ಕ್ಯಾನಿಂಗ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಮಾಡಿ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿದೆ ಎಂದು ಡಾ.ವಿಶ್ವನಾಥ್ ಹೇಳಿದ್ದರು. ಆದರೆ, ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಜೈಲು ಅಧಿಕಾರಿಗಳ ಮನವೊಲಿಕೆ ಸಾಧ್ಯವಾಗಿಲ್ಲ.
ಆರ್‌ಟಿಐ ಮೊರೆ ಹೋದ ವಕೀಲ:
ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರಾಕರಿಸಿದ ಹೊತ್ತಿನಲ್ಲಿಯೇ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯು ತಿರಸ್ಕೃತವಾಗಿದ್ದು, ಇದೀಗ ದರ್ಶನ್ ಪರ ವಕೀಲ ಸುನಿಲಕುಮಾರ್ ಅವರು ದರ್ಶನ್ ಆರೋಗ್ಯದ ಕುರಿತು ಮಾಹಿತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಇ-ಮೇಲ್ ಹಾಗೂ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ವರದಿ ನೀಡುವ ಸಾಧ್ಯತೆ ಇದ್ದು, ಆರೋಗ್ಯವನ್ನೇ ನೆಪವಾಗಿಟ್ಟುಕೊಂಡು ಬಿಸಿಲು ನಾಡು ಬಳ್ಳಾರಿಯಿಂದ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾಗುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.