ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಆರೋಪಿ ನಟ ದರ್ಶನ್ ಮತ್ತು ತಂಡದ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ನಟ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಹೇಳಿಕೆ ನೀಡಿದ ಬಳಿಕ ಚಿಕ್ಕಣ್ಣ ಅವರು ದರ್ಶನ್ ಅವರನ್ನು ಭೇಟಿಯಾಗಿದ್ದರು.
ಸಾಮಾನ್ಯವಾಗಿ ಪ್ರಕರಣ ತನಿಖಾ ಹಂತದಲ್ಲಿರುವಾಗ ಸಾಕ್ಷಿ ಹೇಳಿದ ವ್ಯಕ್ತಿಯು ಜೈಲಿನಲ್ಲಿರುವ ಆರೋಪಿಯನ್ನು ಭೇಟಿಯಾಗುವಂತಿಲ್ಲ. ಆದರೆ ಇದೀಗ ಚಿಕ್ಕಣ್ಣ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಇನ್ನೂ ತನಿಖಾ ಹಂತದಲ್ಲಿರುವಾಗಲೇ ದರ್ಶನ್ ಅವರನ್ನು ಭೇಟಿಯಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಶೀಘ್ರವೇ ಎಸ್‌ಐಟಿ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಯಾಕಾಗಿ ಆರೋಪಿಯನ್ನು ಭೇಟಿಯಾಗಿದ್ದೀರಿ? ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಇದರೊಂದಿಗೆ ಚಿಕ್ಕಣ್ಣ ಹಾಗೂ ದರ್ಶನ್ ಅವರ ಭೇಟಿ ಬಗ್ಗೆ ಜೈಲಾಧಿಕಾರಿಗಳ ಬಳಿಯೂ ಮಾಹಿತಿ ಸಂಗ್ರಹಿಸಬಹುದು. ಜೊತೆಗೆ ಮುಂದೆ ಸಾಕ್ಷಿಗಳು ಆರೋಪಿಯನ್ನು ಭೇಟಿಯಾಗುವುದನ್ನು ತಡೆಯಲು ನ್ಯಾಯಾಲಯದಲ್ಲಿ ಎಸ್‌ಐಟಿ ಮನವಿ ಮಾಡಬಹುದು ಎಂದು ಹೇಳಲಾಗುತ್ತಿದೆ.