ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣದಿಂದ ನನ್ನ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಇದಕ್ಕೆಲ್ಲ ನಾನು ಕೇರ್ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಹೀಗಾಗಿ ಸೋಲಿನ ಭೀತಿಯಿಂದ ನಮ್ಮ ವಿರುದ್ಧ ಕೋವಿಡ್ ಹಗರಣ ಎಂದು ಸುಳ್ಳು ಆರೋಪ ಮಾಡಿ ಎಫ್‌ಐಆರ್ ದಾಖಲಿಸಿದೆ. ಇದೊಂದು ದ್ವೇಷದ ರಾಜಕಾರಣ ಅಷ್ಟೇ ಎಂದರು.
ಉಪ ಚುನಾವಣೆಯಲ್ಲಿ ಇದಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾತನಾಡುತ್ತಾರೋ ನೋಡೋಣ ಎಂದರು.
ಈಗಾಗಲೇ ನಾನು ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನ ಸಂಡೂರಲ್ಲೇ ಉಳಿದುಕೊಂಡು ಪ್ರಚಾರ ಮಾಡಿದರು. ಈ ಉಪಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಅವರಿಗೆ ಜನಾಕ್ರೋಶ ತಿಳಿಯುತ್ತದೆ. ಮೂರೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರ್ನಾಲ್ಕು ದಿನ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿಯಾದಿಯಾಗಿ ನಾಯಕರು ಬೀಡು ಬಿಟ್ಟು ಪ್ರಚಾರ ಮಾಡಿದ್ದರು. ಆದರೆ, ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಜನಬೆಂಬಲ ಸಿಕ್ಕಿಲ್ಲ. ದುಡ್ಡುಕೊಟ್ಟು ಕರೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಲೂಟಿ ಬಗ್ಗೆ ಗುತ್ತಿಗೆದಾರರೇ ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದರು.