ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ಆಗಸ್ಟ್ 13ಕ್ಕೆ ಮುಂದೂಡಲಾಗಿತ್ತು. ಇಂದು ಮಂಗಳವಾರ ಹಗರಣ ವಿಚಾರವಾಗಿ ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.
ನ್ಯಾಯಾಲಯದ ಆದೇಶದ ನಂತರವೇ ಸಿಎಂ ಸಿದ್ದರಾಮಯ್ಯ ವಿಚಾರಣೆ ಎದುರಿಸುತ್ತಾರೆಯೇ ಎಂಬುವುದಾಗಿ ಗೊತ್ತಾಗಲಿದೆ. ಕೋರ್ಟ್ ನ ಆದೇಶದ ನಂತರವೇ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ನೀಡಿರುವ ದೂರನ್ನು ಪರಿಗಣಿಸುವ ಬಗ್ಗೆ ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆ ಇದೆ.
ಲಕ್ಷ್ಮೀ ಐಯ್ಯಂಗಾರ್ ವಾದವನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಒಂದು ವೇಳೆ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದರೆ ಸಿದ್ದರಾಮಯ್ಯ ಕಾನೂನಿನ ಸಂಕಷ್ಟ ಎದುರಿಸಬೇಕಾಗಬಹುದು. ಇದು ಸಿಎಂ ಸಿದ್ದು ರಾಜಕೀಯ ಜೀವನಕ್ಕೆ ಕಂಟಕವಾಗಬಹುದು.