ಉಡುಪಿ: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳಿಗೆ ಶೀಘ್ರ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿ, ನ.13ರಂದು ನಡೆಯಲಿರುವ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ (NDA) ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಈ ಕುರಿತು ಬುಧವಾರ ಅಥವಾ ಗುರುವಾರ ಅಂತಿಮ ತೀರ್ಮಾನವಾಗಲಿದೆ ಎಂದರು.
ಈ ಮೂರೂ ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ಗುರಿಯಾಗಿದೆ. ರಾತ್ರಿಯೇ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದಿಂದ ನಾವು ಕೇಂದ್ರಕ್ಕೆ ಕಳುಹಿಸಿಕೊಡಲಿದ್ದು, ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಬುಧವಾರ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಬುಧವಾರ ಅಥವಾ ಗುರುವಾರ ಮೂರೂ ಕ್ಷೇತ್ರಗಳ ಟಿಕೆಟ್ ಕುರಿತು ಅಂತಿಮ ತೀರ್ಮಾನವಾಗಲಿದೆ ಎಂದರು.
ಸಿಪಿವೈ ಮೇಲೆ ವಿಶ್ವಾಸವಿದೆ:
ಚನ್ನಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಬಂಡಾಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಈಗಾಗಲೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ನಮ್ಮ ಪಕ್ಷದ ಹಿರಿಯ ನಾಯಕರು ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಯೋಗೇಶ್ವರ್ ಅವರು ಅಂಥ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.