ಬೆಂಗಳೂರು: ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಅವಕಾಶ ನಿರಾಕರಣೆಯಿಂದ ಕೆರಳಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ತಡರಾತ್ರಿಯ ವರೆಗೆ ಹಾಡು ಹಾಡುತ್ತಾ, ಭಜನೆ ಮಾಡುತ್ತಾ, ಹರಟೆಯಲ್ಲಿ ಕಾಲಕಳೆದರು. ಇದೀಗ ಬೆಳ್ಳಂಬೆಳಗ್ಗೆ ಎದ್ದು ಕೆಲವರು ವಿಧಾನಸೌಧದ ಆವರಣದಲ್ಲಿ ವಾಕಿಂಗ್ ಮಾಡಿದರು.ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದರೂ ರಾತ್ರಿಯಿಡೀ ಸದನದಲ್ಲಿಯೇ ತಂಗಿರುವ ಶಾಸಕರು, ಭಿನ್ನ, ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ರಾತ್ರಿ ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೇವಡಿ ಮಾಡಿದ ಪ್ರತಿಪಕ್ಷದ ಶಾಸಕರು, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ ದಲಿತರ ಹಣವನ್ನು ನುಂಗ್ತಾರೆ’ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಇನ್ನು ಧರಣಿ ನಿರತ ಬಿಜೆಪಿ ಸದಸ್ಯರನ್ನು ಮಾತನಾಡಿಸಲು ಆಗಮಿಸಿದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಊಟದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಮಾತನಾಡಿದರು. ಆದರೆ ನಾವು ಹಗರಣದ ಹಣದ ಊಟವನ್ನು ಮಾಡುವುದಿಲ್ಲ ಎಂದು ಆರ್ ಅಶೋಕ್ ಹೇಳಿದರು. ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.
ಇನ್ನು ಕೆಲವು ಶಾಸಕರು ನಿದ್ದೆಯಿಂದ ಬೇಗ ಎದ್ದು ಬೆಳ್ಳಂಬೆಳಗ್ಗೆ ವಿಧಾನಸೌಧದ ಆವರಣದಲ್ಲಿ ವಾಕಿಂಗ್ ಮಾಡಿದರು. ಶಾಸಕರಾದ ಭರತ್ ಶೆಟ್ಟಿ, ಪ್ರಭು ಚೌಹ್ಹಾನ್ ವಾಕಿಂಗ್ ಮಾಡಿದರು.