ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ (Shraddha Walkar) ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿ ಯುವತಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ದೇಹವನ್ನು 30 ತುಂಡುಗಳಾಗಿಸಿ ಫ್ರಿಡ್ಜ್ ನಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಆರೋಪಿಯು ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೇಲ್ನೋಟಕ್ಕೆ ಮೃತ ಯುವತಿಯನ್ನು ಹೊರ ರಾಜ್ಯದಿಂದ ಬಂದ ಸುಮಾರು 25 ರಿಂದ 26 ವಯಸ್ಸಿನವಳು ಎಂದು ಗುರುತಿಸಲಾಗಿದ್ದು, ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ಈ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವೈಯಾಲಿಕಾವಲ್ ಪೊಲೀಸರು ತನಿಖೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ‘ಒಬ್ಬರೇ ಕೊಲೆ ಮಾಡಿದ್ದು, 30ಕ್ಕೂ ಹೆಚ್ಚು ಪೀಸ್ ಮಾಡಿ ಸಿಂಗಲ್ ಡೋರ್ನ 165 ಲೀಟರ್ಸ್ ಫ್ರೀಡ್ಜ್ನಲ್ಲಿ ಮೃತದೇಹದ ತುಂಡುಗಳನ್ನು ಇಡಲಾಗಿತ್ತು. ಮೃತ ಯುವತಿಯನ್ನು ಛತ್ತೀಸ್ಘಡ್ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯದವರು ಇಲ್ಲಿಯೇ ಸೆಟಲ್ ಆಗಿದ್ದವರು. ಗಂಡನ ಜೊತೆಗೆ ಬೇರೆಯಾಗಿದ್ದ ಮಹಿಳೆ, ಒಬ್ಬಳೆ ವಾಸವಾಗಿದ್ದಳು ಎಂದಿದ್ದಾರೆ.
ಮನೆಯಿಂದ ಬರುತ್ತಿದ್ದ ದುರ್ನಾತ
ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅದೇ ಬಿಲ್ಡಿಂಗ್ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ. ಅದರಂತೆ ಕೊಲೆಯಾದಂತಹ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಹೊಡೆದು ಒಳಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. 2-3 ತಿಂಗಳಿನಿಂದ ಮಹಿಳೆ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಹಾಲಕ್ಷ್ಮಿ ಬೇರೆ ರಾಜ್ಯದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿದ್ದರು. ಗಂಡನಿಂದ ದೂರವಾಗಿದ್ದ ಮಹಾಲಕ್ಷ್ಮಿ ಒಬ್ಬಳೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಪಿಕಪ್ ಡ್ರಾಪ್ ಎಂದು ಒಬ್ಬ ಯುವಕ ಆಕೆಯನ್ನು ಕರೆದೊಯ್ಯುತ್ತಿದ್ದ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.