ಬೆಂಗಳೂರು: ಪ್ರಸ್ತಾವಿತ ಕೇಂದ್ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸದಿರಲು ಕರ್ನಾಟಕ ವಕ್ಫ್ ಮಂಡಳಿ ನಿರ್ಧರಿಸಿದೆ. ವಕ್ಫ್ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ತಿದ್ದುಪಡಿಯನ್ನು ವಿರೋಧಿಸುವ ನಿರ್ಣಯವನ್ನು ನಿನ್ನೆ ಗುರುವಾರ ಅಂಗೀಕರಿಸಲಾಯಿತು.
ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ ಉಪಸ್ಥಿತರಿದ್ದರು. ಸಭೆಯ ನಂತರ ಸಚಿವರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು, ತಿದ್ದುಪಡಿಯನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಲಹಾ ಸಮಿತಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ವಕ್ಫ್ ಮಂಡಳಿಯ ಆಡಳಿತ ಸಮಿತಿ ನಿರ್ಧರಿಸಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಚೇರಿ ಪ್ರಕಟಣೆ ತಿಳಿಸಿದೆ. “ವಕ್ಫ್ ಮಂಡಳಿಯು ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರಸ್ತಾವಿತ ತಿದ್ದುಪಡಿಯು ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ತಿದ್ದುಪಡಿಯ ಹಿಂದಿನ ಉದ್ದೇಶ ಬೇರೆಯೇ ಇರಬಹುದು ಎಂದರು.
ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಇದರ ವಿರುದ್ಧ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸುವಂತೆಯೂ ಸಭೆ ಶಿಫಾರಸು ಮಾಡಿತು.