ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಹೇರಿಕೆಯನ್ನು ವಿರೋಧಿಸಿ ಪ್ರತಿವರ್ಷ ಜೂನ್ 25ರಂದು ಸಂವಿಧಾನ್ ಹತ್ಯಾ ದಿವಸ್ ಆಚರಣೆ ಮಾಡಲಾಗುವುದು ಎಂದು ಘೋಷಿಸಿದೆ. 1975ರ ಜೂನ್ 25ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಹೇರಿತು.
ಇದರಿಂದ 2 ವರ್ಷಗಳ ಕಾಲ ಜನರ ನಾಗರಿಕ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಹೌದು ತುರ್ತು ಪರಿಸ್ಥಿತಿಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮಿತ್ ಶಾ ಅವರಿಂದು ʻಸಂವಿಧಾನ ಹತ್ಯಾ ದಿವಸ್ʼ ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಕೇಂದ್ರ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಸುತ್ತೋಲೆ ಪ್ರತಿಯನ್ನೂ ಹಂಚಿಕೊಂಡಿದ್ದಾರೆ. “ಜೂನ್ 25, 1975ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ವಾಧಿಕಾರಿ ಮನಸ್ಥಿತಿಯಿಂದ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಕತ್ತು ಹಿಸುಕಿದರು.
ಇದರಿಂದ ತಮ್ಮ ತಪ್ಪಿಲ್ಲದಿದ್ದರೂ ಲಕ್ಷಾಂತರ ಜನರನ್ನು ಜೈಲಿಗೆ ಹಾಕಲಾಯಿತು ಮತ್ತು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲಾಯಿತು” ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಜೂನ್ 25ರ ದಿನವನ್ನು ʻಸಂವಿಧಾನ ಹತ್ಯಾ ದಿವಸ್ʼ ಎಂದು ಆಚರಿಸಲು ನಿರ್ಧರಿಸಿದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ದಿನವು 1975ರ ತುರ್ತು ಪರಿಸ್ಥಿತಿಯ ಅಮಾನವೀಯ ನೋವುಗಳನ್ನು ಸಹಿಸಿಕೊಂಡ ಎಲ್ಲರ ಬೃಹತ್ ಕೊಡುಗೆಗಳನ್ನು ಸ್ಮರಿಸುತ್ತದೆ ಎಂದು ಅಮಿತ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಸಲಹೆ ಮೇರೆಗೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಕಳೆದ ಜೂನ್ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಕರಾಳ ದಿನಗಳನ್ನು ನೆನೆದು ಅಮಿತ್ ಶಾ ಅವರು, ʻಸಂವಿಧಾನ ಹತ್ಯಾ ದಿವಸ್ʼ ಆಚರಣೆ ಮಾಡುವಂತೆ ಘೋಷಣೆ ಮಾಡಿದ್ದಾರೆ.