ನವದೆಹಲಿ: ಅರ್ಹತೆ ಇಲ್ಲದ ಸಿಬ್ಬಂದಿ ಬಳಸಿ ವಿಮಾನಗಳನ್ನು ನಿರ್ವಹಣೆ ಮಾಡಿದ್ದಕ್ಕಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಡಿಜಿಸಿಎ 90 ಲಕ್ಷ ರೂ. ದಂಡ ವಿಧಿಸಿದೆ.
ಜೊತೆಗೆ ಏರ್ ಇಂಡಿಯಾದ ಕಾರ್ಯಾಚರಣೆಯ ನಿರ್ದೇಶಕರಿಗೆ 6 ಲಕ್ಷ ರೂ. ಮತ್ತು ತರಬೇತಿ ನಿರ್ದೇಶಕರಿಗೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸಂಬಂಧಿಸಿದ ಪೈಲಟ್‌ಗೆ ಡಿಜಿಸಿಎ ಎಚ್ಚರಿಸಿದೆ.
ಏರ್ ಇಂಡಿಯಾ ಅನುಭವ ಇಲ್ಲದ ಲೈನ್ ಕ್ಯಾಪ್ಟನ್‌ಗಳನ್ನು ಬಳಸಿಕೊಂಡು ವಿಮಾನ ನಿರ್ವಹಿಸಲಾಗುತ್ತಿದೆ. ಇದು ಸುರಕ್ಷತಾ ನೀತಿ ಉಲ್ಲಂಘನೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದೇವೆ ಎಂದು ಡಿಜಿಸಿಎ ತಿಳಿಸಿದೆ.
ಜು.10 ರಂದು ಏರ್‌ಲೈನ್ ಸಲ್ಲಿಸಿದ ವರದಿಯ ನಂತರ ಡಿಜಿಸಿಎ ದಾಖಲಾತಿಗಳ ಪರಿಶೀಲನೆ, ವೇಳಾಪಟ್ಟಿ ಸೇರಿದಂತೆ ವಿಮಾನದ ಕಾರ್ಯಾಚರಣೆಗಳನ್ನು ಪರಿಶೀಲಿಸಿ ತನಿಖೆ ನಡೆಸಿತ್ತು. ಈ ಸಂದರ್ಭ ಹಲವಾರು ನಿಯಮ ಉಲ್ಲಂಘನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ನಂತರ ಏರ್ ಇಂಡಿಯಾಗೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ನೋಟಿಸ್‌ಗೆ ನೀಡಿರುವ ಉತ್ತರ ತೃಪ್ತಿಕರವಾಗಿರದ ಹಿನ್ನಲೆ ನಿಯಮದ ಅನುಸಾರ ಡಿಜಿಸಿಎ ದಂಡ ವಿಧಿಸಿದೆ.