ಬೆಂಗಳೂರು: 1000 ಗ್ರಾಮ ಆಡಳಿತ ಅಧಿಕಾರಿ (ವಿಎಒ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಲಿಖಿತ ಪರೀಕ್ಷೆಯು ಎಲ್ಲೆಡೆ ಸುಗಮವಾಗಿ ನಡೆದಿದ್ದು ಶೇ. 80ರಷ್ಟು ಮಂದಿ ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಬೆಂಗಳೂರಿನ 88 ಕೇಂದ್ರ ಸೇರಿದಂತೆ ರಾಜ್ಯದ 1,173 ಕೇಂದ್ರಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ನಡೆಯಿತು. ಒಟ್ಟು 4.79 ಲಕ್ಷ ಅಭ್ಯರ್ಥಿಗಳ ಪೈಕಿ 4.16 ಲಕ್ಷ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಅವರಲ್ಲಿ ಶೇ.80ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ಪ್ರತಿ ಕೇಂದ್ರಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್, ವಸ್ತ್ರಸಂಹಿತೆಯ ಕಟ್ಟುನಿಟ್ಟಿನ ಪಾಲನೆ, ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಗಳಿಗೆ ಬಿಡುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ವಹಿಸಲಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಪರೀಕ್ಷಾ ಕೊಠಡಿಯ ಚಿತ್ರಣವನ್ನು ವೆಬ್‌ಕಾಸ್ಟಿಂಗ್ ಮೂಲಕ ಬೆಂಗಳೂರಿನ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿನ ಕಮಾಂಡ್ ಸೆಂಟರ್‌ನಲ್ಲೇ ಕುಳಿತು ವೀಕ್ಷಿಸಲಾಯಿತು.
ಯಾವುದೇ ಕೇಂದ್ರದಲ್ಲೂ ಅಕ್ರಮ, ಸಮಸ್ಯೆ, ಲೋಪದೋಷಗಳು ಕಂಡುಬಂದಿಲ್ಲ. ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆದಿದೆ. ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಿದ್ದ ಕಾರಣ ಆ ಜಿಲ್ಲೆಗಳಲ್ಲಿ ಹೆಚ್ಚಿನ ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.