ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಅ.26ರಂದು ಅರಮನೆ ಮೈದಾನದಲ್ಲಿ ‘ಕಲ್ಯಾಣವೃಷ್ಟಿಸ್ತವ’ ಮಹಾಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಎ.ನಾಗಾನಂದ ಅವರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣವೃಷ್ಟಿಸ್ತವ ಕಾರ್ಯಕ್ರಮದ ಅಂಗವಾಗಿ ‘ನಮಃ ಶಿವಾಯ’ ಸ್ತೋತ್ರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಇರುವ ಹಿರಿಯ ಸ್ವಾಮೀಜಿ ಅವರು ಸನ್ಯಾಸತ್ವ ಸ್ವೀಕರಿಸಿ 50 ವರ್ಷವಾಗುತ್ತಿರುವುದರಿಂದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಭಕ್ತರು ಸೇರಿದಂತೆ ಎರಡು ಲಕ್ಷಕ್ಕೂ ಅಧಿಕ ಜನರು ಆಗಮಿಸಲಿದ್ದು, ವೇದಾಂತ ಭಾರತಿ ಸಂಸ್ಥೆಯಿಂದ ಶಂಕರಾಚಾರ್ಯರ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ. ಏಕಕಂಠದಲ್ಲಿ ಸ್ತೋತ್ರಗಳು ಮೊಳಗಲಿವೆ. ಇದು ವಿನೂತನ ಕಾರ್ಯಕ್ರಮವಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಾಗಲಿದೆ ಎಂದು ವಿವರಿಸಿದರು.
ಉಚಿತವಾಗಿ ಸ್ತೋತ್ರ ಅಧ್ಯಯನ:
ಮಹಾಭಿಯಾನದಲ್ಲಿ ಶ್ರೀ ಶಂಕರಭಗವತ್ಪಾದರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಹಾಗೂ ಲಕ್ಷ್ಮೀನರಸಿಂಹಕರುಣಾರಸಸ್ತೋತ್ರ ಎಂಬ ಮೂರು ಸ್ತೋತ್ರಗಳನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಸಹಸ್ರಾರು ಪಾರಾಯಣ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ಸ್ತೋತ್ರಗಳನ್ನು ಅಭ್ಯಾಸ ಮಾಡಿಸಲಾಗಿದೆ.