ಮುಂಬೈ: ಪ್ಲಾಸ್ಟಿಕ್, ಗುಜಿರಿ ವಸ್ತುಗಳನ್ನು ಆಯ್ದುಕೊಂಡು ಬದುಕು ಸಾಗಿಸುವ ಬಡವನೋರ್ವನು ತನ್ನ ಪುತ್ರನಿಗೆ ಐಫೋನ್ 16 ಹಾಗೂ ತನಗೆ ಐಫೋನ್ 15 ಖರೀದಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ. ಈತ ಕೈಯಲ್ಲಿ ದುಡ್ಡು ಹಿಡಿದು ಆ್ಯಪಲ್ ಸ್ಟೋರ್‌ಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಆದರೆ ಹಣ ನೀಡಿ ಎರಡು ಫೋನ್ ಖರೀದಿಸಿದ್ದಾನೆ. ಕಠಿಣ ಪರಿಶ್ರಮದ ಮೂಲಕ ಎರಡು ಫೋನ್ ಖರೀದಿಸಿದ ಈ ಚಿಂದಿ ಆಯುವ ವ್ಯಕ್ತಿಯ ಯಶಸ್ಸಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸರ್ಪ್‌ಮಿತ್ರ ಪ್ರವೀಣ್ ಪಾಟೀಲ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಫೋನ್ ಖರೀದಿಸಿರುವ ವೀಡಿಯೋ ಹಂಚಿಕೊಳ್ಳಲಾಗಿದೆ. ಮುಂಬೈನಲ್ಲಿ ಗುಜುರಿ ಆಯ್ದುಕೊಂಡು ಜೀವನ ಸಾಗಿಸುತ್ತಿರುವ ಬಡ ಶ್ರಮಿಕನ ಸಾಧನೆಯ ಈ ವೀಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಗುಜುರಿ ವಸ್ತುಗಳನ್ನು ಹೆಕ್ಕಿ ಮಾರಾಟ ಮಾಡಿ ಈ ಶ್ರಮಿಕ ಜೀವನ ಸಾಗಿಸುತ್ತಿದ್ದಾನೆ. ಸ್ಲಂನಲ್ಲಿ ವಾಸವಿರುವ ಈತನ ಕುಟುಂಬದ ಎಲ್ಲರೂ ಇದೇ ಗುಜುರಿ ಆಯುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲೇ ಇವರ ಜೀವನ ಸಾಗುತ್ತಿದೆ. ತನ್ನ ಮಗ ಐಫೋನ್ ಕನಸು ಕಾಣುತ್ತಿದ್ದ. ಇದನ್ನೂ ಈಡೇರಿಸಲು ಈತ ಹೆಚ್ಚುವರಿ ಕೆಲಸ ಮಾಡಿದ್ದಾನೆ. ಸತತವಾಗಿ ಕೆಲಸ ಮಾಡಿ ಹಣ ಸಂಪಾದಿಸಿದ್ದಾನೆ. ಮಗನ ಆಸೆ ಈಡೇರಿಸಲು ಇದೀಗ ದುಬಾರಿ ಐಫೋನ್ ಖರೀದಿಸಿದ್ದಾನೆ. ಐಫೋನ್ ಖರೀದಿಸುವಾಗ ತನ್ನ ಮಗನ ಮಾತ್ರವಲ್ಲ, ತನ್ನ ಆಸೆಯನ್ನೂ ಈಡೇರಿಸಿಕೊಂಡಿದ್ದಾನೆ. ಕಾರಣ ಒಟ್ಟು 2 ಐಫೋನ್ ಈತ ಖರೀದಿಸಿದ್ದಾನೆ.
ಭಾರತದಲ್ಲಿ ಐಫೋನ್ 16 ಸೀರಿಸ್ ಆರಂಭಿಕ ಬೆಲೆ 79,900 ರೂಪಾಯಿ, ಇನ್ನು ಟಾಪ್ ಮಾಡೆಲ್ ಬೆಲೆ 1,59,900 ರೂಪಾಯಿ. ಇನ್ನು ಐಫೋನ್ 15 ಸೀರಿಸ್ ಬೆಲೆ 69,900 ರೂಪಾಯಿಂದ ಆರಂಭಗೊಳ್ಳುತ್ತಿದೆ. ಆದರೆ ಕೆಲ ಆಫರ್ ಲಭ್ಯವಿರುವ ಕಾರಣ ಐಫೋನ್ 15 ಫೋನ್ 54 ಸಾವಿರ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಈ ಗುಜುರಿ ಆಯುವ ಕಾರ್ಮಿಕ ಯಾವ ಸೀರಿಸ್ ಫೋನ್ ಖರೀದಿಸಿದ್ದಾನೆ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.