Norovirus infection : ನೊರೊವೈರಸ್ ಒಂದು ಸಾಂಕ್ರಾಮಿಕ ವೈರಸ್ ಆಗಿದ್ದು ವಾಂತಿ ಮತ್ತು ಅತಿಸಾರವನ್ನು ಉ೦ಟುಮಾಡುತ್ತದೆ. ದೇಹದ ಜಠರ, ಕರುಳಿನ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ನೊರೊವೈರಸ್ತೆ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ತುತ್ತಾಗಬಹುದು. ನೊರೊವೈರಸ್ ಹರಡದಿರಲು ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎ೦ಬ ಮಾಹಿತಿ ಇಲ್ಲಿದೆ.
ಆಗಾಗ್ಗೆ ಕೈಗಳನ್ನು ತೊಳೆಯುತ್ತಿರಿ
ಕಲುಷಿತ ಸ್ಥಳಗಳನ್ನು ಸ್ಪರ್ಶಿಸುವುದರಿಂದ ನೊರೊವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನಿಯಮಿತವಾಗಿ ಕೈಗಳನ್ನು ತೊಳೆಯುತ್ತಿರಿ. ವಿಶೇಷವಾಗಿ ಬಾತ್ತೂಮ್ ಬಳಸಿದ ನಂತರ, ತಿನ್ನುವ ಮೊದಲು, ಅಡುಗೆ ಮಾಡುವ ಮೊದಲು ಮತ್ತು ಯಾರಿಗಾದರೂ ಆಹಾರವನ್ನು ಬಡಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ.
ಕ್ಲೋರಿನೇಟೆಡ್ ನೀರು
ಕಲುಷಿತ ನೀರಿನ ಮೂಲಕ ನೊರೊವೈರಸ್ ಹರಡುವುದರಿಂದ ಕುಡಿಯುವ ನೀರಿನ ಮೂಲಗಳು, ಬಾವಿಗಳು ಮತ್ತು ಶೇಖರಣಾ ತೊಟ್ಟಿಗಳನ್ನು ಬೀಚಿಂಗ್ ಪೌಡರ್ ಬಳಸಿ ಕ್ಲೋರಿನೇಟ್ ಮಾಡಿ. ಮನೆಯ ಬಳಕೆಗೆ ಕ್ಲೋರಿನೇಟೆಡ್ ನೀರನ್ನು ಬಳಸಿ. ಕುಡಿಯಲು ಕುದಿಸಿ ಆರಿಸಿದ ನೀರನ್ನು ಮಾತ್ರ ಬಳಸಿ.
ಆಹಾರ ಸೇವನೆ
ರೋಗಾಣು ಹರಡಿದ್ದ ಆಹಾರ ಸೇವನೆಯಿಂದಲೂ ನೊರೊವೈರಸ್ ದೇಹವನ್ನು ಪ್ರವೇಶ ಮಾಡಬಹುದು. ಆದ್ದರಿಂದ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರವೇ ಬಳಸಬೇಕು. ಸಮುದ್ರಾಹಾರ, ಏಡಿ ಮತ್ತು ಚಿಪ್ಪುಮೀನುಗಳನ್ನು ಸರಿಯಾಗಿ ಬೇಯಿಸಿದ ನಂತರವೇ ತಿನ್ನಬೇಕು. ಅಡುಗೆ ತಯಾರಿಕೆ ವೇಳೆ ಸ್ವಚ್ಛವಾಗಿ ಇರಬೇಕು.
ವೈಯಕ್ತಿಕ ನೈರ್ಮಲ್ಯ
ಸ್ವಚ್ಛತೆ ಹಾಗೂ ನೈರ್ಮಲ್ಯದ ಕಡೆಗೆ ಗಮನ ಕೊಡಬೇಕಾದ್ದು ಮೊದಲ ಕರ್ತವ್ಯ. ಸೋಂಕಿತ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿದ್ದರೆ ಆರೋಗ್ಯವಂತ ವ್ಯಕ್ತಿಗೂ ನೊರೊವೈರಸ್ ಸೋಂಕು ತಗುಲುತ್ತದೆ. ಸೋಂಕಿತರು ಬಳಸಿದ ಬಟ್ಟೆಗಳನ್ನು 60 ಡಿಗ್ರಿ ತಾಪಮಾನದಲ್ಲಿ ನೀರು ಮತ್ತು ಮಾರ್ಜಕದಿಂದ ಸ್ವಚ್ಛಗೊಳಿಸಬೇಕು.