ಇದನ್ನು ‘ಬೆಟ್ಟದ ನೆಲ್ಲಿ‘ಯೆಂದು ಕರೆಯುವ ವಾಡಿಕೆ ಇದೆ. ನೆಲ್ಲಿಕಾಯಿ ಎಂದರೆ ಸಾಮಾನ್ಯವಾಗಿ ಸಿಗುವ ಚಿಕ್ಕ ನೆಲ್ಲಿ ಕಾರ್ತೀಕ ಮಾಸದಲ್ಲಿ ಸಿಗುವ ದುಂಡಗಿನ ಹಸಿರು-ಹಳದಿ ಮಿಶ್ರಿತ ಬಣ್ಣ ಹುಳಿ-ಸಿಹಿ ಮಿಶ್ರಿತ ರುಚಿಯಿಂದ ಕೂಡಿದ್ದು ಇದೊಂದು ಬಹಳ ಪ್ರಾಚೀನ ಕಾಲದಿಂದಲೂ ಸಿಗುವ ಹಣ್ಣು. ಆಯುರ್ವೇದದ ಸುಪ್ರಸಿದ್ಧ ಪೌಷ್ಠಿಕ ಔಷಧಿಯಾದ ‘ಚ್ಯವನಪ್ರಾಶ’ ಎಂಬ ಅವಲೇಹ ಇದನ್ನು ಮೊಟ್ಟ ಮೊದಲಿಗೆ ಘೋರ ತಪಸ್ಸಿನಿಂದ ಉಂಟಾದ ಮುಪ್ಪನ್ನು ಹೋಗಲಾಡಿಸಲು `ಚ್ಯವನ ಋಷಿಗೆ’ ಅಶ್ವಿನಿ ದೇವತೆಗಳು ನೀಡಿದ ಉತ್ತಮ ಔಷಧಿ.
ಆದ್ದರಿಂದಲೇ ಅದಕ್ಕೆ ‘ಚ್ಯವನ ಪ್ರಾಶ’ವೆಂಬ ಹೆಸರು ಬಂದಿತು. ಇದರಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ದೊರಕುತ್ತದೆ. ಈ ಹಣ್ಣು ಬಹಳ ಶ್ರೇಷ್ಠವಾದ ಶಕ್ತಿವರ್ಧಕ (ನಿರೋಧಕ ಶಕ್ತಿ) ಹಾಗೂ ವಯಸ್ಸಾದ ಅಂದರೆ ಮುಪ್ಪನ್ನು ಮುಂದೂಡುವ ಶಕ್ತಿಯುಳ್ಳದ್ದು. ಹಸಿಯಾಗಿ ಸಿಗದೆ ಇರುವ ಕಾಲದಲ್ಲಿ ನೆರಳಲ್ಲಿ ಒಣಗಿಸಿ ಇಟ್ಟುಕೊಂಡು ಅದರ ಪುಡಿಯನ್ನು ಉಪಯೋಗಿಸಬಹುದು.
ಬೆಟ್ಟದ ನೆಲ್ಲಿಕಾಯಿ ಉಪಯೋಗಗಳು
1. ಹಸಿಯಾದ ಹಣ್ಣಿನಿಂದ (ಹಿಂಡಿ) ಬರುವ ರಸವನ್ನು (2-3 ಟೀ ಚಮಚೆಯಷ್ಟು) ಸ್ವಲ್ಪ ಜೇನಿನೊಂದಿಗೆ (1-2 ಟೀ ಚಮಚ) ಖಾಲಿ ಹೊಟ್ಟೆಯಲ್ಲಿ ದಿನಕ್ಕೆ 2 ಬಾರಿ ನೀಡಲು ಉತ್ತಮ ಪುಷ್ಟಿದಾಯಕ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಶ್ಯಕ್ತಿಯನ್ನು ನಿವಾರಿಸುತ್ತದೆ.
2. ಒಣಗಿದ ನೆಲ್ಲಿ ಪುಡಿಯೊಂದಿಗೆ ಸಮ ಪ್ರಮಾಣ ಅರಿಶಿನ ಪುಡಿ ಮತ್ತು ಅಮೃತ ಬಳ್ಳಿಯ ಹುಡಿಯನ್ನು ಮಿಶ್ರಮಾಡಿ 1-2 ಚಮಚೆಯಷ್ಟನ್ನು ಜೇನಿನೊಂದಿಗೆ ಅಥವಾ ನೀರಿನಲ್ಲಿ ಸಿಹಿ ಮೂತ್ರ ರೋಗದಲ್ಲಿ ನೀಡಬಹುದು.
3. ಒಣಗಿದ ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ 1 ಟೀ ಚಮಚೆಯಷ್ಟನ್ನು ಆಮ್ಲಪಿತ್ತ ರೋಗದಲ್ಲಿ ನೀಡಬಹುದು.
ಹಸಿ ಹಣ್ಣನ್ನು ಮೊರಬ್ಬ ಅಥವಾ ಉಪ್ಪಿನಕಾಯಿಯನ್ನು ಮಾಡಲು ಉಪಯೋಗಿಸುತ್ತಾರೆ. ಇದರ ಕಷಾಯವನ್ನು ಬೃಂಗಾಮಲಕ ತೈಲ, ಬ್ರಾಹ್ಮ ಆಮಲಕ ತೈಲಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ಇದನ್ನು ಓದಿ: ನಿತ್ಯ ಜೀವನದಲ್ಲಿ ವೀಳ್ಯದೆಲೆಯ ಔಷದೀಯ ಗುಣಗಳು ಮತ್ತು ಅದರ ಮಹತ್ವ