Blood clotting problem : ಏಪ್ರಿಲ್ 17 ಅನ್ನು ವಿಶ್ವ ಹಿಮೋಫಿಲಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಆಶಯ ಈ ದಿನದ್ದು.
ಹೀಮೋಫಿಲಿಯಾ ರೋಗ ಎಂದರೇನು?
ಹೀಮೋಫೀಲಿಯಾ ಇದ್ದವರಿಗೆ ರಕ್ತಸ್ರಾವ ನಿಲ್ಲುವುದಿಲ್ಲ. ಅವರಿಗೆ ಒ೦ದು ಚಿಕ್ಕ ಗಾಯವಾದರೂ ಬಹಳ ರಕ್ತ ನಷ್ಟವಾಗುತ್ತದೆ. ಕೆಲವೊಮ್ಮೆ ತಿಳಿದಿರುವ ಅಥವಾ ಗುರುತಿಸಬಹುದಾದ ಕಾರಣವಿಲ್ಲದೆ ರಕ್ತಸ್ರಾವವು ಉಂಟಾಗಬಹುದು. ಕನ್ನಡದಲ್ಲಿ ಇದನ್ನು ಕುಸುಮ ರೋಗ ಎ೦ದು ಕರೆಯಲಾಗುತ್ತದೆ.
ಹೀಮೋಫಿಲಿಯಾ ವಿಧಗಳು
ಹೀಮೋಫಿಲಿಯಾದಲ್ಲಿ ಎ, ಬಿ, ಸಿ ಎ೦ಬ ಮೂರು ವಿಧಗಳಿವೆ. ರಕ್ತಹೆಪ್ಪುಗಟ್ಟಲು ನೆರವಾಗುವ 13 ಘಟಕಗಳಲ್ಲಿ 8ನೇ ಫ್ಯಾಕ್ಟರ್ ಅಥವಾ ಘಟಕ ಕಡಿಮೆ ಇದ್ದರೆ ಅದನ್ನು ಟೈಪ್ ಎ ಎಂದು, 9ನೇ ಫ್ಯಾಕ್ಟರ್ ಕಡಿಮೆ ಇದ್ದರೆ ಟೈಪ್ ಬಿ ಎ೦ದು ಕರೆಯಲಾಗುತ್ತದೆ. ಇನ್ನು, ಈ ರೋಗದ ತೀವ್ರತೆಗೆ ತಕ್ಕಂತೆ ಸೌಮ್ಯ ಹಿಮೋಫಿಲಿಯಾ, ಸಾಧಾರಣ ಹಿಮೋಫಿಲಿಯಾ ಮತ್ತು ತೀವ್ರ ಹಿಮೋಫಿಲಿಯಾ ಎಂದು ವಿ೦ಗಡಿಸಲಾಗುತ್ತದೆ.
ಹೀಮೋಫಿಲಿಯಾ ರೋಗದ ಪರಿಣಾಮಗಳು
ಹೀಮೋಫಿಲಿಯಾ ಇದ್ದಾಗ ಗಂಟು, ಕೀಲು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವ ಆಗಬಹುದಾಗಿದ್ದು, ಮೂಗಿನಲ್ಲಿ ರಕ್ತಸ್ರಾವ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ, ಸಂಧಿನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿಯೂ ರಕ್ತ ಸ್ರಾವವಾಗಬಹುದು. ಹೆಚ್ಚು ರಕ್ತಸ್ರಾವವಾದರೆ ತಕ್ಷಣವೇ ವೈದ್ಯರಿಂದ ಚುಚ್ಚುಮದ್ದು ತೆಗೆದುಕೊಳ್ಳಬೇಕು.
ಹೀಮೋಫಿಲಿಯಾ ಮತ್ತು ದೈಹಿಕ ಚಟುವಟಿಕೆ
ಹೀಮೋಫಿಲಿಯಾ ಇರುವ ಜನರು ವ್ಯಾಯಾಮ ಮಾಡುವುದು ಮತ್ತು ಕ್ರೀಡೆಗಳಲ್ಲಿ ಆಡುವುದು ತುಂಬಾ ಅಪಾಯಕಾರಿಯಾಗಿದ್ದು, ಎಚ್ಚರಿಕೆಯಿ೦ದ ಮಾಡಿದರೆ ಯಾವುದೇ ರೀತಿಯ ವ್ಯಾಯಾಮವನ್ನು ಮಾಡಬಹುದು. ಹೀಮೋಫಿಲಿಯಾ ಇರುವವರು ತಮ್ಮ ದೈಹಿಕ ಚಟುವಟಿಕೆಗಳನ್ನು ತುಂಬಾ ಎಚ್ಚರಿಕೆಯಿ೦ದ ಆಯ್ಕೆ ಮಾಡಬೇಕು.
ಹೀಮೋಫಿಲಿಯಾ ರೋಗಿಗಳಿಗೆ ಆಹಾರಕ್ರಮ
ತಾಜಾ ಹಣ್ಣುಗಳು, ಸೊಪ್ಪುಗಳು ಮತ್ತು ತರಕಾರಿಗಳನ್ನು ಹೀಮೋಫಿಲಿಯಾ ಇದ್ದವರು ಹೆಚ್ಚಾಗಿ ಸೇವಿಸಬೇಕಾಗಿದ್ದು, ವಿಶೇಷವಾಗಿ ಹೆಚ್ಚು ಪ್ರೊಟೀನ್ ಇರುವ ಆಹಾರಗಳಾದ ಬೀನ್ಸ್ ನಟ್ಸ್ ಟೋಫು, ಚಿಕನ್ ಮತ್ತು ಮೀನುಗಳನ್ನು ತಿನ್ನಬೇಕು. ಕೊಬ್ಬಿನಂಶ ಕಡಿಮೆ ಇರುವ ಹಾಲನ್ನು ಕುಡಿಯಬೇಕು. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು.
ಚಿಕಿತ್ಸೆಯ ಆಯ್ಕೆಗಳು
ಸಾಮಾನ್ಯ ರಕ್ತ ಪರೀಕ್ಷೆಯು ಹಿಮೋಫಿಲಿಯಾವನ್ನು ಗುರುತಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, ಈ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಕೆಲವು ಚುಚ್ಚುಮದ್ದುಗಳ ಮೂಲಕ ರಕ್ತಸ್ರಾವವನ್ನು ತಡೆಯಬಹುದು.