ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರು ಶನಿವಾರ ಚಂಚಲ್ಗುಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದರು.
“ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಚಿರಋಣಿ. ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಂತೆ ಮಾಡಲು ಏನೂ ಇಲ್ಲ; ನಾನು ಚೆನ್ನಾಗಿರುತ್ತೇನೆ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದೇನೆ ಮತ್ತು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನಾನು ಮತ್ತೊಮ್ಮೆ ಸಂತ್ರಸ್ತರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ದುರದೃಷ್ಟಕರ ಘಟನೆಯಾಗಿದ್ದು, ಏನಾಯಿತು ಎಂಬುದಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ “ಎಂದು ನಟ ಹೇಳಿದರು.
ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ ಅರ್ಜುನ್, “ಇದು ಅಪಘಾತವಾಗಿತ್ತು, ಮತ್ತು ನಾನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕುಟುಂಬಕ್ಕಾಗಿ ಇರುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು”ಎಂದು ಬರೆದುಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪುಷ್ಪಾ-2 ಚಿತ್ರದ ಪ್ರಿಮಿಯರ್ ಪ್ರದರ್ಶನದ ವೇಳೆ ಹೈದರಾಬಾದ್ ಚಿತ್ರಮಂದಿರದ ಹೊರಗೆ ನಡೆದ ಕಾಲ್ತುಳಿತಕ್ಕೆ ಮಹಿಳೆಯೊಬ್ಬಳ ದುರಂತ ಸಾವಿಗೆ ಕಾರಣವಾದ ಘಟನೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.