ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಯಾಗಿದೆ. ಆದರೆ, ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಈ ನಡುವೆ, ಟಾಲಿವುಡ್ ತವರು ಹೈದರಾಬಾದ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ.
ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ ಥಿಯೇಟರ್‌ನಲ್ಲಿ ಬುಧವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 12 ವರ್ಷದ ಮಗ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪುಷ್ಪ 2- ದಿ ರೂಲ್ ಚಿತ್ರ ಡಿಸೆಂಬರ್ 5ರ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಬಂದಿತ್ತು. ರೇವತಿ (39) ಮೃತ ಮಹಿಳೆ. ಅವರ ಒಂಬತ್ತು ವರ್ಷದ ಮಗ ಶ್ರೀತೇಜಾನನ್ನು ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ತೇಜಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ದಿಲ್‌ಸುಖ್‌ನಗರ ನಿವಾಸಿಯಾದ ರೇವತಿ, ಶ್ರೀ ತೇಜಾ ಅವರ ಪತಿ ಭಾಸ್ಕರ್ ಮತ್ತು ಕಿರಿಯ ಮಗುವಿನೊಂದಿಗೆ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಕುಟುಂಬದೊಂದಿಗೆ ಥಿಯೇಟರ್‌ನಿಂದ ಹೊರಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.