ಖ್ಯಾತ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಕನಸಿನ ರಾಣಿ. ಈಗ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಕೂಡ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟಿ ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಸಿನಿಮಾದಲ್ಲಿ ನಾಯಕಿಯಾಗಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ನಟಿಸಲಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಈ ಚಿತ್ರದ ಮುಹೂರ್ತ ನೆರವೇರಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ.
ರಾಧನಾ ರಾಮ್ ಬಗ್ಗೆ ನಿಮಗೆಷ್ಟು ಗೊತ್ತು?
ಇನ್ನು, ನಟಿ ರಾಧನಾ ರಾಮ್.. ಮೂಲ ಹೆಸರು ಅನನ್ಯಾ. ಇವರು, ಮಾಲಾಶ್ರೀ-ನಿರ್ಮಾಪಕ ರಾಮು ಅವರ ಪುತ್ರಿಯಾಗಿದ್ದು, ಬೆಂಗಳೂರಿನ ಬಿಶಪ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದಿದ್ದಾರೆ.
ಇದರ ಜೊತೆಗೆ ರಾಧನಾ ರಾಮ್ ಮುಂಬೈನ ಕಿಶೋರ್ ಕುಮಾರ್ ಮತ್ತು ಅನುಪಮ್ ಖೇರ್ ನಟನಾ ಸಂಸ್ಥೆಯಲ್ಲಿ 2 ವರ್ಷ ಕಾಲ ಅಭಿನಯ, ಡ್ಯಾನ್ಸ್, ನಾಟಕಗಳನ್ನು ಮಾಡುವ ಮೂಲಕ ನಟನೆಗೆ ಬೇಕಾದ ಎಲ್ಲ ತರಬೇತಿ ಪೂರ್ಣಗೊಳಿಸಿದ್ದಾರೆ. ಸದ್ಯ ಚೊಚ್ಚಲ ಚಿತ್ರದಲ್ಲೇ ನಟ ದರ್ಶನ್‌ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.