ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ, ನಿರ್ಮಾಪಕ, ರೆಬೆಲ್ ಸ್ಟಾರ್ ಖ್ಯಾತಿಯ ಕೃಷ್ಣಂ ರಾಜು (83) ಅವರು ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂ ರಾಜು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.25ಕ್ಕೆ ಕೊನೆಯುಸಿರೆಳೆದಿದ್ದಾರೆ.
ಜನವರಿ 20, 1940 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ಜನಿಸಿದ್ದ ಕೃಷ್ಣಂ ರಾಜು ಅವರು ತೆಲುಗಿನಲ್ಲಿ 190ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, NTR, ನಟಿ ರೇಖಾ ಅವರಂತಹ ಸೂಪರ್ ಸ್ಟಾರ್‌ಗಳ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದರು.
ಇವರಿಗೆ ದಕ್ಷಿಣ ಫಿಲ್ಮ್‌ಫೇರ್ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ, ದಕ್ಷಿಣ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಅತ್ಯುತ್ತಮ ನಟನೆಗಾಗಿ ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಅಷ್ಟೇ ಅಲ್ಲ, ಪ್ರಜಾ ರಾಜ್ಯಮ್ ಪಕ್ಷದಿಂದ ಲೋಕಸಭಾ ಸದಸ್ಯ (1999–2004) ರಾಗಿ ಆಯ್ಕೆಯಾಗಿದ್ದರು.
ಇನ್ನು, ಬಾಹಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ದೊಡ್ಡಪ್ಪ ಆಗಿರುವ ಕೃಷ್ಣಂ ರಾಜು ಅವರ ಸಾವಿಗೆ ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ.