ಮುಂಬೈ: ಮದುವೆಯ ಆಮಿಷವೊಡ್ಡಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 45 ವರ್ಷದ ಚಲನಚಿತ್ರ ನಿರ್ಮಾಪಕನನ್ನು ಘಾಜಿಯಾಬಾದ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿಯನ್ನು ಸನೋಜ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಮಹಾಕುಂಭದ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಮೊನಾಲಿಸಾಳಿಗೆ ಚಿತ್ರದಲ್ಲಿ ಪಾತ್ರ ನೀಡುವುದಾಗಿ ಭರವಸೆ ನೀಡಿದ ಬಳಿಕ ಈ ನಿರ್ದೇಶಕನೂ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದರು.
ದೆಹಲಿ ಹೈಕೋರ್ಟ್ನಿಂದ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದ ಮಿಶ್ರಾ ಅವರನ್ನು ಗಾಜಿಯಾಬಾದ್ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಆರೋಪಿಗಳಿಂದ ಬೆದರಿಕೆ ಹಾಕಿದ್ದಾಗಿ 28 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಧ್ಯ ದೆಹಲಿಯ ನಬಿ ಕರೀಮ್ ಪೊಲೀಸ್ ಠಾಣೆಯಲ್ಲಿ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ಮಿಶ್ರಾ ಅವರೊಂದಿಗೆ ವಾಸಿಸುತ್ತಿದ್ದರು. ಅವರ ಸಂಬಂಧದ ಅವಧಿಯಲ್ಲಿ, ಮಿಶ್ರಾ ತನ್ನನ್ನು ಮೂರು ಗರ್ಭಪಾತಗಳಿಗೆ ಒತ್ತಾಯಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ನಂತರ ಮಿಶ್ರಾ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ಸಲ್ಲಿಸಿದ್ದಾಳೆ.
ಆಕೆಯ ಹೇಳಿಕೆಯನ್ನು ಬೆಂಬಲಿಸುವ ವೈದ್ಯಕೀಯ ದಾಖಲೆಗಳನ್ನು ಮುಜಾಫರ್ನಗರದಿಂದ ಪಡೆಯಲಾಗಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ತನಿಖೆಯ ಸಮಯದಲ್ಲಿ, ಮಿಶ್ರಾ ಈಗಾಗಲೇ ವಿವಾಹಿತನಾಗಿದ್ದು, ಮುಂಬೈನಲ್ಲಿ ಕುಟುಂಬವನ್ನು ಹೊಂದಿದ್ದ ಎಂದು ಪೊಲೀಸರಿಗೆ ತಿಳಿದುಬಂದಿದೆ.