ಬಾಲಿವುಡ್ ನಟಿ ಅಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರಕ್ಕೆ ಮತ್ತೊಂದು ಕಾನೂನು ತೊಡಕು ಎದುರಾಗಿದ್ದು, ಚಿತ್ರದ ಮೊದಲ ಪ್ರೊಮೋ ಬಿಡುಗಡೆಯಾಗಿದ್ದಾಗಲೇ ಚಿತ್ರ ತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಗಂಗೂಬಾಯಿ ಕುಟುಂಬಸ್ಥರು, ಇದೀಗ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದು, ಚಿತ್ರದ ಬಿಡುಗಡೆಗೆ ತಡೆಯನ್ನು ಕೋರಿ ನೋಟಿಸ್ ಕಳುಹಿಸಿದ್ದಾರೆ.
ಗಂಗೂಬಾಯಿ ಅವರ ಕುಟುಂಬಸ್ಥರು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹಾಗೂ ಚಿತ್ರದ ಕಥೆಯ ಲೇಖಕ ಎಸ್.ಹುಸೇನ್ ಜೈದಿ ವಿರುದ್ಧ ಮಾನನಷ್ಟ ಹಾಗೂ ಚಾರಿತ್ರ್ಯ ಹರಣದ ಆರೋಪ ಮಾಡಿದ್ದು, ನೋಟಿಸ್ನಲ್ಲಿ ನಾಯಕಯಾಗಿ ನಟಿಸಿರುವ ನಟಿ ಆಲಿಯಾ ಭಟ್ ಹೆಸರೂ ಕೂಡ ಉಲ್ಲೇಖಿಸಲಾಗಿದೆ.
ಇನ್ನು, ಚಿತ್ರದಲ್ಲಿ ಗಂಗೂಬಾಯಿ ಅವರನ್ನು ವೇಶ್ಯೆಯ ರೀತಿ ಚಿತ್ರಿಸಲಾಗಿದೆ ಎಂಬುವುದು ಕುಟುಂಬಸ್ಥರ ಆರೋಪವಾಗಿದ್ದು, 2020ರಲ್ಲಿ ಚಿತ್ರದ ಮೊದಲ ಪ್ರೋಮೋ ಬಿಡುಗಡೆಯಾಗಿದ್ದಾಗ ಗಂಗೂಬಾಯಿ ಅವರ ದತ್ತುಪುತ್ರರು ನ್ಯಾಯಾಲಯದ ಮೊರೆ ಹೋಗಿದ್ದು, ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿರುವ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಫೆಬ್ರವರಿ 25ಕ್ಕೆ ಗಂಗೂಬಾಯಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಗಂಗೂಬಾಯಿ ಕುಟುಂಬಸ್ಥರು ನ್ಯಾಯಾಲಯವನ್ನು ಕೋರಿದ್ದಾರೆ.