ಹೊನ್ನಾವರ: ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ, ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿಯಾದ ಉಮಾಶ್ರೀಯವರು ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವ ಮೂಲಕ ಪೇಕ್ಷಕರ ಮನಗೆದ್ದರು.
ಪ್ರಸಿದ್ದ ಯಕ್ಷಗಾನ ಮೇಳದಲ್ಲಿ ಒಂದಾದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡುರು ಮೇಳದವರು ಆಯೋಜಿಸಿದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಉಮಾಶ್ರೀಯವರು ಮಂಥರೆ ಪಾತ್ರದಲ್ಲಿ ಅಭಿನಯಿಸಿದರು.
ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಸಿನಿಮಾ ರಂಗದಲ್ಲಿ ತಮ್ಮ ವೃತ್ತಿ ಮುಂದುವರೆಸಿ 350ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಯಕ್ಷಗಾನ ರಂಗದಲ್ಲಿ ಹಾಸ್ಯಗಾರರು ನಿರ್ವಹಿಸುವ ಸವಾಲಿನ ಪಾತ್ರಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗಭೂಮಿಯಲ್ಲಿ ಉಮಾಶ್ರೀಯವರು ಪಾತ್ರ ನಿರ್ವಹಿಸಿದರು.
ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ನಟಿಗೆ ಕೂತೂಹಲಿಗರಾಗಿ ಕಾಯುತ್ತಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀಯವರೊಂದಿಗೆ ಸಂಭಾಷಣೆಯಲ್ಲಿ ಗಮನ ಸೆಳೆದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘಟಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಕ್ಷಗಾನದಲ್ಲಿ ಪಾತ್ರ ಮಾಡುವುದಕ್ಕೆ ಆಹ್ವಾನ ಬಂದಾಗ ಅದು ತುಂಬಾ ಸವಾಲಾದುದು ಎಂದು ನಾನು ನಿರಾಕರಿಸಿದ್ದೆ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ನನ್ನಿಂದ ಮಂಥರೆಯ ಪಾತ್ರ ಮಾಡಿಸಬೇಕು ಎಂದು ಆಸೆ ಪಟ್ಟಿದ್ದರು ಎಂದು ಸಂಘಟಕರು ತಿಳಿಸಿದಾಗ ಪಾತ್ರ ಮಾಡಲು ಒಪ್ಪಿಕೊಂಡೆ. ಈ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೇನೆಯೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ. ನಾನು ಮಾಡಿದ್ದು ಯಕ್ಷಗಾನ ಆಯ್ತೋ? ನಾಟಕ ಆಯ್ತೋ? ಅಥವಾ ಅವೆರಡರ ಸಮ್ಮಿಳಿತವಾಯಿತೋ ಗೊತ್ತಿಲ್ಲ. ಆದರೆ ಪ್ರೇಕ್ಷಕರು ಮೆಚ್ಚಿಕೊಂಡಿರುವುದನ್ನು ಗಮನಿಸಿದ್ದೇನೆ. ಇದೊಂದು ಹೊಸ ಅನುಭವವನ್ನು ನೀಡಿದೆ. ಯಕ್ಷಗಾನ ಅದ್ಬುತವಾದ ಕಲೆ. ಈ ಕಲೆ ಬೆಳೆಯಬೇಕು ಎಂದರು.
ಅತೀಥಿಯಾಗಿ ಪಾಲ್ಗೊಂಡಿದ್ದ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಮಾತನಾಡಿ ಯಕ್ಷಗಾನವು ನಮ್ಮ ಭಾವವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸುತ್ತದೆ. ಉಮಾಶ್ರೀ ಅವರು ಈ ಕಲೆಯ ಬಗ್ಗೆ ಅಭಿಮಾನ ತೋರಿರುವುದು ಸಂತಸದ ಸಂಗತಿ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ಉಮಾಶ್ರೀ ಅವರು ಯಕ್ಷಗಾನದ ಪ್ರಥಮ ಪ್ರದರ್ಶನದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ. ಸಂಘಟಕರಾದ ಅಪ್ಪಿ ಹೆಗಡೆ ಅವರ ಪ್ರಯತ್ನದಿಂದ ಯಕ್ಷಗಾನ ಅಭಿಮಾನಿಗಳು ಅವರ ಪಾತ್ರವನ್ನು ಕಣ್ತುಂಬಿಕೊಂಡಿದ್ದಾರೆ ಎಂದರು.
ಯಕ್ಷಗಾನ ಅಭಿಮಾನಿಗಳಾದ ನಾಗರಾಜ ನಾಯ್ಕ ತೊರ್ಕೆ, ರಾಜು ಭಂಡಾರಿ, ಹೊಸಾಕುಳಿ ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ ಇದ್ದರು. ಕಾರ್ಯಕ್ರಮದ ಸಂಘಟಕರಾದ ಅಪ್ಪಿ ಹೆಗಡೆ ಸಾಣ್ಮನೆ ಕುಟುಂಬದವರು ಉಮಾಶ್ರೀ ಅವರನ್ನು ಸನ್ಮಾನಿಸಿದರು.