ಬೆಂಗಳೂರು: ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಅವರಿಗೆ ಡಿಸೆಂಬರ್ 11 ರಂದು ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಚಿಕಿತ್ಸೆಗಾಗಿ ಜಾಮೀನು ಪಡೆದುಕೊಂಡಿದ್ದಾರೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಹೈಕೋರ್ಟ್ ಗೆ ಮಾಹಿತಿ ನೀಡಿ ದರ್ಶನ್ ಗೆ ಡಿಸೆಂಬರ್ 11 ರಂದು ಶಸ್ತ್ರಚಿಕಿತ್ಸೆ ನೆರವೇರಿಸಲು ವೈದ್ಯರು ನಿರ್ಧರಿಸಿದ್ದು, ಅಂದೇ ಮದ್ಯಂತರ ಜಾಮೀನು ಮುಕ್ತಾಯವಾಗುವ ಹಿನ್ನಲೆ, ಜಾಮೀನು ವಿಸ್ತರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆ ದರ್ಶನ್ ಅವರ ಮಧ್ಯಂತರ ಜಾಮೀನು ಸಹ ವಿಸ್ತರಣೆಯಾಗಿದೆ.
ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳು ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಮಧ್ಯಂತರ ಜಾಮೀನು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅ.30 ರಂದು ಹೈಕೋರ್ಟ್ ದರ್ಶನ್ ಗೆ ಆರು ವಾರ ಮಧ್ಯಂತರ ಜಾಮೀನು ನೀಡಿದ್ದು, ಇದುವರೆಗೂ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ ಜಾಮೀನು ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.