ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಬೇಲ್ ಸಿಗದೇ ಪರದಾಡುತ್ತಿದ್ದರೆ, ಇತ್ತ ಬೆನ್ನು ನೋವಿನಿಂದ ನರಳಾಡುತ್ತಿರುವುದು ಫ್ಯಾನ್ಸ್‌ಗಳಿಗೆ ಬೇಸರ ಉಂಟುಮಾಡಿತ್ತು. ಇದೀಗ ದಚ್ಚು ಅಭಿಮಾನಿಗಳಿಗೆ ಖುಷಿಕೊಡುವಂತಹ ಸುದ್ದಿಯೊಂದು ಬಂದಿದೆ.
‘ಡೆವಿಲ್ ದ ಹೀರೋ’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರಾದರೂ ದರ್ಶನ್ ಜೈಲಿನಲ್ಲಿರುವುದರಿಂದ ಸದ್ಯ ಹಳೆಯ ಸಿನಿಮಾಗಳನ್ನು ರೀರಿಲೀಸ್ ಮಾಡಲಾಗುತ್ತಿದೆ. ಇದೀಗ ಅದೇ ಸಾಲಿನಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ‘ನವಗ್ರಹ’ ಚಿತ್ರ ಮರುಬಿಡುಗಡೆಯಾಗುತ್ತಿದ್ದು ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಅಭಿಮಾನಿಗಳು ನವಗ್ರಹ ರೀ ರಿಲೀಸ್‌ಗೆ ಬೇಡಿಕೆ ಇಟ್ಟು ಅಭಿಮಾನಿಗಳು ಅಭಿಯಾನ ಮಾಡಿದ್ದು ಇದೀಗ ಅವರ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.
ದರ್ಶನ್ ನಾಯಕತ್ವದಲ್ಲಿ 2008 ರಲ್ಲಿ ತೆರೆಕಂಡಿದ್ದ ನವಗ್ರಹ ಸಿನಿಮಾ ಪ್ರೇಕ್ಷಕರ ಮನಗೆದ್ದು ಸೂಪರ್ ಹಿಟ್ ಆಗಿತ್ತು. ಮೈಸೂರು ಅಂಬಾರಿ ಕಳ್ಳತನ ಯತ್ನದ ಕಥಾಹಂದರ ಹೊಂದಿದ್ದ ಈ ಚಿತ್ರ ಬಹುತಾರಾಗಣವನ್ನು ಒಳಗೊಂಡಿತ್ತು. ಇದೀಗ ಚಿತ್ರ ಮತ್ತೆ ಹಿರಿತೆರೆ ಮೇಲೆ ಬರುತ್ತಿರುವ ಹಿನ್ನಲೆ ನಿರ್ದೇಶಕ ದಿನಕರ ತೂಗುದೀಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಪ್ರೇಕ್ಷಕರ ಒತ್ತಾಯದ ಮೇರೆಗೆ ಇದೇ ನವೆಂಬರ್ 8 ರಂದು ಮರುಬಿಡುಗಡೆ ಮಾಡುತ್ತಿರೋದಾಗಿ ತಿಳಿಸಿದ್ದಾರೆ.
ಈ ಹಿಂದೆ ನವಗ್ರಹ ಚಿತ್ರ ನವೆಂಬರ್ 7 ರಂದು ಬಿಡುಗಡೆಯಾಗಿದ್ದು ಮರು ಬಿಡುಗಡೆಯೂ ಸಹ ನವೆಂಬರ್‌ನಲ್ಲೇ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.