ತುಮಕೂರು: ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿರುವ ಗುಸು ಗುಸು ವಿಚಾರ ಬಟಾ ಬಯಲಾಗಿದ್ದು, ಎಲ್ಲೆಡೆ ಭರ್ಜರಿ ಸಡ್ಡು ಮಾಡಿದೆ.
ಹೌದು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಗುರುವಾರ ತುಮಕೂರು ನಗರಕ್ಕೆ ಭೇಟಿ ನೀಡಿದ್ದು, ಈ ವೇಳೆ ಕರೆದಿದ್ದ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ಸಚಿವ ಬೈರತಿ ಬಸವರಾಜು ಹಾಗೂ ಸಂಸದ ಜಿ.ಎಸ್ ಬಸವರಾಜು ಅಕ್ಕಪಕ್ಕದಲ್ಲಿ ಕುಳಿತಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಬೈರತಿ ಬಸವರಾಜು ಅವರ ಕಿವಿಯಲ್ಲಿ ಸಂಸದ ಜಿ.ಎಸ್.ಬಸವರಾಜು ಅವರು ಸಚಿವ ಮಾಧುಸ್ವಾಮಿಯ ಕುರಿತು ಮಾತನಾಡಿದ್ದಾರೆ.
ಇನ್ನು, ಈ ಗುಸು ಗುಸು ಮಾತುಗಳು ಮಾಧ್ಯಮದ ಮೈಕ್ ನಲ್ಲಿ ರೆಕಾರ್ಡ್ ಆಗಿದ್ದು, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಏಕ ವಚನದಲ್ಲೇ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು, “ಈ ನನ್ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ? ದಕ್ಷಿಣ ಕೊರಿಯಾದ ಕಿಂಗ್ಪಿನ್ ಇದ್ದಾನಲ್ಲ ಅವನಂತೆ. ನಮ್ಮ ಜಿಲ್ಲೆಯನ್ನು ಹಾಳು ಮಾಡಿದ್ದಾನೆ. ಜಿಲ್ಲೆಯಲ್ಲಿ ಮುಂದೆ ಒಂದು ಸೀಟೂ ಬರಲ್ಲ’ ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಸಚಿವ ಬೈರತಿ ಕಿವಿಯಲ್ಲಿ ಹೇಳಿದ್ದು, ಸದ್ಯ ತಮ್ಮದೇ ಪಕ್ಷದ ಸಚಿವರ ವಿರುದ್ಧ ಸಂಸದರು ಆಡಿರುವ ಗುಸು ಗುಸು ಮಾತು ಬಿಜೆಪಿ ನಾಯಕರಿಗೆ ಇರಿಸು ಮುರಿಸು ಉಂಟು ಮಾಡಿದೆ.