ಈ ಕುರಿತು ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮಾಹಿತಿ ನೀಡಿದ್ದು, ವಿಶ್ವಕಪ್ ಬಳಿಕ ಟಿ-20 ನಾಯಕತ್ವ ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ವಿಶ್ವಕಪ್ ಬಳಿಕ ಕೊಹ್ಲಿ ಟಿ-20 ಮತ್ತು ಏಕದಿನ ಪಂದ್ಯಗಳ ನಾಯಕತ್ವ ತೊರೆಯಲಿದ್ದಾರೆ ಎಂದು ಎರಡು ದಿನಗಳ ಹಿಂದೆ ಸುದ್ದಿಯಾಗಿತ್ತು. ಅದನ್ನು ಅಲ್ಲಗಳೆದಿದ್ದ ಬಿಸಿಸಿಐ, ಕೊಹ್ಲಿ ಎಲ್ಲಾ ಮಾದರಿಯ ತಂಡಗಳ ನಾಯಕರಾಗಿ ಇರಲಿದ್ದಾರೆ ಎಂದು ಹೇಳಿತ್ತು. ಇಂದು ತಮ್ಮ ನಿರ್ಧಾರ ತಿಳಿಸುವ ಮೂಲಕ ವಿರಾಟ್ ಕೊಹ್ಲಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ನಾಯಕತ್ವ ವಿದಾಯ ಹೇಳಲು ಕೊಹ್ಲಿ ತೆಗೆದುಕೊಂಡ ಪ್ರಮುಖ 3 ಕಾರಣಗಳು:
ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಯಂತೆಯೇ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ನಲ್ಲಿ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಒಂದೆಡೆ, ಕೊಹ್ಲಿ ನಾಯಕತ್ವದಲ್ಲಿ ಭಾರತ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಪ್ರಶಸ್ತಿ ಗೆದ್ದಿಲ್ಲ. ಇನ್ನೊಂದೆಡೆ, ಐಪಿಎಲ್ ನಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸತತ 2 ಬಾರಿ ಪ್ರಶಸ್ತಿ ಗೆದ್ದಿದೆ. ಅಲ್ಲದೆ, ನಾಯಕತ್ವದಿಂದಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
T20 ಯಲ್ಲಿ ನಾಯಕನಾಗಿ ವಿರಾಟ್ ಸಾಧನೆ:
T20 ಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪಂದ್ಯಗಳು- 45 ಹಾಡಿದ್ದು, ಇದರಲ್ಲಿ 27 ರಲ್ಲಿ ಗೆಲುವು, 14 ಪಂದ್ಯಗಳಲ್ಲಿ ಸೋಲು, 2 ಪಂದ್ಯಗಳು ಟೈ ಆಗಿದ್ದು, ಉಳಿದ 2 ಪಂದ್ಯಗಳ ಫಲಿತಾಂಶವು ಅಸ್ಪಷ್ಟವಾಗಿದೆ.
ಇನ್ನು ಗೆಲುವಿನ ದರ – 65.11% ಇದ್ದು ,ವಿರಾಟ್ ನಾಯಕತ್ವದಲ್ಲಿ, ಟೀಮ್ ಇಂಡಿಯಾ ಪ್ರಮುಖವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸರಣಿಯನ್ನು ಗೆದ್ದಿದೆ.




