ಚೆನ್ನೈ : ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ ಗಳ ಭಾರಿ ಅಂತರದ ಜಯ ದಾಖಲಿಸಿರುವ ಭಾರತ ತಂಡವು 4 ಪಂದ್ಯಗಳ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ್ದ 482 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಜೋ ರೂಟ್ ಪಡೆ ಎರಡನೇ ಇನ್ನಿಂಗ್ಸ್ ನಲ್ಲಿ 54.2 ಓವರ್ ಗಳಲ್ಲಿ 164 ರನ್ ಗಳಿಸುವಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 317 ರನ್ ಗಳ ಭಾರಿ ಅಂತರದಿಂದ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ಪರ ರೋರಿ ಬರ್ನ್ಸ್ 25 (42 ಎಸೆತ), ಡ್ಯಾನಿಯಲ್ ಲಾರೆನ್ಸ್ 26 (53 ಎಸೆತ), ನಾಯಕ ಜೋ ರೂಟ್ 33 (92 ಎಸೆತ), ಮೊಯಿಲ್ ಅಲಿ 43 (18 ಎಸೆತ) ರನ್ ಗಳಿಸಿದರು. ಭಾರತದ ಪರ 2ನೇ ಇನ್ನಿಂಗ್ಸ್ ನಲ್ಲಿ ಅಕ್ಸಾರ್ ಪಟೇಲ್ 5, ಅಶ್ವಿನ್ 3 ಹಾಗು ಕುಲದೀಪ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ಪರ 8 ವಿಕೆಟ್ ಪಡೆದು ಭರ್ಜರಿ ಶತಕ ಸಿಡಿಸಿ ಆಲ್ರೌಂಡರ್ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್ ಅಶ್ವಿನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.