ನಿರ್ಮಲ್: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ದಿಲವಾರ್ಪುರ ಮಂಡಲ ಕೇಂದ್ರದಲ್ಲಿ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಶಾಸನಗಳು ದೊರಕಿವೆ ಎಂದು ಇತಿಹಾಸಕಾರ ಮತ್ತು ಖ್ಯಾತ ಕವಿ ತುಮ್ಮಲಾ ದೇವರಾಜ ಗುರುವಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಕವಿ ತುಮ್ಮಲಾ ದೇವರಾಜ ಅವರು, ಗ್ರಾಮದ ನಾಲ್ಕು ಪ್ರಾಚೀನ ಶಾಸನಗಳನ್ನು ಗುರುತಿಸಿ ತೆಲಂಗಾಣ ರಾಜ್ಯ ಪುರಾತತ್ವ ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ದಿಲವರ್‌ಪುರ ಗ್ರಾಮ ಪಂಚಾಯಿತಿಯಲ್ಲಿ ಒಂದು, ಹನುಮಾನ್ ದೇವಸ್ಥಾನದಲ್ಲಿ ಮತ್ತೊಂದು ಮತ್ತು ಇತರ ಸ್ಥಳಗಳಲ್ಲಿ ಎರಡು ಶಾಸನಗಳು ಇವೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿನ ಶಾಸನವು ಕಲ್ಯಾಣಿ ಚಾಲಕ್ಯರ ಕಾಲಕ್ಕೆ ಸೇರಿದ್ದು, ಎರಡೂ ಕಡೆ ಕನ್ನಡ ಲಿಪಿಯಲ್ಲಿ ಅಕ್ಷರಗಳಿವೆ ಎನ್ನಲಾಗಿದೆ. ಆ ಸಮಯದಲ್ಲಿ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡಿದ ದಾನಿಯ ಹೆಸರನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅಂದಿನ ಕಾಲದ ದಾನಿಗಳಾದ ನಾಗಮಯ್ಯ, ಅಲಾಯಮ್ಮ, ಸುಂಕಮಯ್ಯ ಅವರ ಹೆಸರುಗಳನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.