ಬೆಂಗಳೂರು: ಸಂವಿಧಾನದ ಪರಿಚ್ಛೇದ 371ಜೆ ಅಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸರ್ಕಾರ 9 ತಿಂಗಳ ಹಿಂದೆ ಘೋಷಿಸಿರುವ ರೂ.1,500 ಕೋಟಿ ಅನುದಾನ ಈ ವರೆಗೆ ಖರ್ಚಾಗಿಲ್ಲ. ಇದಕ್ಕೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕೆಂದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಆರ್ಟಿಕಲ್ 371ಜೆ ಆಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಸ್ತುತ ವರ್ಷ ರೂ.1,500 ಕೋಟಿಗಳನ್ನು ಘೋಷಣೆ ಮಾಡಿರುವುದು ಸರಿಯಷ್ಟೆ ಈಗಾಗಲೇ 9 ತಿಂಗಳು ಮುಗಿದು ಹೋಗುತ್ತಿವೆ. ಉಳಿದಿರುವುದು 3 ತಿಂಗಳು ಮಾತ್ರ. ಆದರೆ ಇದುವರೆಗೂ ಕೂಡ ಈ ಯೋಜನೆಯಡಿ ತಗೆದುಕೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನೆ ಅನುಮೋದನೆ ಮಾಡಿರುವುದಿಲ್ಲ. ಹೀಗಿರುವಾಗ ಕ್ರಿಯಾ ಯೋಜನೆಗಳನ್ನು ಅನುಮೋದನೆ ಮಾಡುವುದು ಯಾವಾಗ? ಟೆಂಡರ್ ಕರೆಯುವುದು ಯಾವಾಗ? ಕಾಮಗಾರಿಗಳನ್ನು ಪ್ರಾರಂಭಿಸುವುದು ಯಾವಾಗ?
ಇದನ್ನೆಲ್ಲಾ ನೋಡಿದರೆ ಸರ್ಕಾರ ಈ ವರ್ಷ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವಂತೆ ಕಾಣುತ್ತಿದೆ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆಂದು ಹಿಂದಿನ ಯು.ಪಿ.ಎ. ಸರ್ಕಾರ ಆರ್ಟಿಕಲ್ 371ಜೆ ಕೆಳಗೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಆದರೆ ಪ್ರಸ್ತುತ ಸರ್ಕಾರ ಅದರ ಮೂಲ ಉದ್ದೇಶವನ್ನೇ ಮರೆತಂತೆ ಕಾಣುತ್ತಿದೆ.
ಆದುದರಿಂದ, ಯಾವ ಕಾರಣಕ್ಕೂ ಈ ಪ್ರದೇಶಗಳನ್ನು ನಿರ್ಲಕ್ಷಿಸದೆ ಕೂಡರ್ಲೇ ಘೋಷಣೆ ಮಾಡಿದ ಅನುದಾನಕ್ಕೆ ಕ್ರಿಯಾ ಯೋಜನೆಗಳನ್ನು ಅನುಮೋದಿಸಿ ಟೆಂಡರ್ ಕರೆದು ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂವಿಧಾನದ ಪರಿಚ್ಛೇದ 371ಜೆ ಅಡಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸರ್ಕಾರ 9 ತಿಂಗಳ ಹಿಂದೆ ಘೋಷಿಸಿರುವ ರೂ.1,500 ಕೋಟಿ ಅನುದಾನ ಈ ವರೆಗೆ ಖರ್ಚಾಗಿಲ್ಲ.
ಇದಕ್ಕೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕೆಂದು ಎಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/RwNIZFihuf— Siddaramaiah (@siddaramaiah) December 9, 2020