ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಕೊರತೆಯು ಈಗ ನೇರವಾಗಿ ಕೃಷಿ ವಲಯದ ಮೇಲೆ ಗದಾಪ್ರಹಾರ ಮಾಡಿದೆ. ಸಿಲಿಂಡರ್ ಅಭಾವದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನೂರಾರು ಹೋಟೆಲ್ಗಳು ಹಾಗೂ ಉಪಹಾರ ಮಂದಿರಗಳು ಬಾಗಿಲು ಹಾಕಿವೆ. ಇದರ ನೇರ ಪರಿಣಾಮ ಈಗ ತರಕಾರಿ ಮಾರುಕಟ್ಟೆಯ ಮೇಲೆ ಬೀರಿದ್ದು, ಕೇಳುವವರಿಲ್ಲದೆ ತರಕಾರಿ ಬೆಲೆ ಭಾರೀ ಕುಸಿತ ಕಂಡಿದೆ.
ಮಣ್ಣು ಪಾಲಾಗುತ್ತಿರುವ ಅನ್ನದಾತನ ಬೆವರು:
ಹೋಟೆಲ್ ಉದ್ಯಮವು ತರಕಾರಿಗಳ ದೊಡ್ಡ ಗ್ರಾಹಕನಾಗಿತ್ತು. ಆದರೆ ಹೋಟೆಲ್ಗಳು ಬಂದ್ ಆಗಿರುವುದರಿಂದ ಬೇಡಿಕೆ ಸಂಪೂರ್ಣ ಕುಸಿದಿದೆ. ಮಾರುಕಟ್ಟೆಗೆ ತಂದ ತರಕಾರಿಗಳು ಮಾರಾಟವಾಗದೆ ರಾಶಿ-ರಾಶಿಯಾಗಿ ಕೊಳೆಯುತ್ತಿವೆ. “ಬೆಳೆದ ಬೆಳೆಗೆ ಹಾಕಿದ ಬಂಡವಾಳವೂ ಬರುತ್ತಿಲ್ಲ, ಮಾರುಕಟ್ಟೆಗೆ ತರಲು ಮಾಡಿದ ಸಾಗಾಣಿಕೆ ವೆಚ್ಚವೂ ಕೈ ಸೇರುತ್ತಿಲ್ಲ” ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಂದಿನ ಮಾರುಕಟ್ಟೆ ದರ ಪಟ್ಟಿ (ಪ್ರತಿ ಕೆ.ಜಿಗೆ):
ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿ ದರಗಳು ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿವೆ:
ಬದನೇಕಾಯಿ: ₹2
ಸೋರೆಕಾಯಿ / ಮೂಲಂಗಿ: ₹5
ಆಲೂಗಡ್ಡೆ: ₹6
ಕ್ಯಾರೆಟ್: ₹8
ಬೆಂಡೆಕಾಯಿ: ₹10
ಈರುಳ್ಳಿ: ₹12
ಹಾಗಲಕಾಯಿ: ₹15
ಬೀನ್ಸ್ / ಕ್ಯಾಪ್ಸಿಕಂ: ₹20
ಸಿಲಿಂಡರ್ ಸಮಸ್ಯೆ ಶೀಘ್ರವೇ ಬಗೆಹರಿಯದಿದ್ದರೆ ರೈತರ ಮತ್ತು ಹೋಟೆಲ್ ಮಾಲೀಕರ ಬದುಕು ಮತ್ತಷ್ಟು ದುಸ್ತರವಾಗುವುದರಲ್ಲಿ ಸಂಶಯವಿಲ್ಲ.




