Domestic Workers Bill | ಕರ್ನಾಟಕ ಸರ್ಕಾರವು ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಖಾತರಿಪಡಿಸುವ ನಿಟ್ಟಿನಲ್ಲಿ ‘ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025’ ರೂಪಿಸಲು ಮುಂದಾಗಿದೆ.
ಹೌದು, ಈ ಮಸೂದೆಯು ಅಸಂಘಟಿತ ವಲಯದ ಗೃಹ ಕಾರ್ಮಿಕರ ಹಿತವನ್ನು ರಕ್ಷಿಸಲಿದ್ದು, ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿಪಡಿಸುವ ನಿಟ್ಟಿನಲ್ಲಿ, ಉದ್ಯೋಗದಾತರಿಗೆ 5% ಕಲ್ಯಾಣ ಶುಲ್ಕ ವಿಧಿಸುವ ಗೃಹ ಕಾರ್ಮಿಕರ ಮಸೂದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ
ಮಸೂದೆ ಜಾರಿಗೆ ಬಂದರೆ, ಮನೆಗಳಲ್ಲಿ ಕೆಲಸ ಮಾಡುವವರು, ಸೇವಕಿಯರು, ಅಡುಗೆಯವರು, ಚಾಲಕರು, ದಾದಿಯರು ಮತ್ತು ಇತರರು ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮನೆಕೆಲಸಗಾರರನ್ನು ನೇಮಿಸಿಕೊಳ್ಳುವವರು, ವೇತನದ ಶೇ 5ರಷ್ಟನ್ನು ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ. ನೋಂದಾಯಿತ ಕಾರ್ಮಿಕರಿಗೆ ಕನಿಷ್ಠ ವೇತನ, ಓವರ್ ಟೈಂ, ಮಾತೃತ್ವ ಸೌಲಭ್ಯ, ರಜಾದಿನಗಳು, ವೈದ್ಯಕೀಯ ಮರುಪಾವತಿ, ಶಿಕ್ಷಣ ಬೆಂಬಲ ಮತ್ತು ಕೆಲಸದ ಸ್ಥಳದಲ್ಲಿ ಗಾಯಗೊಂಡರೆ ಪರಿಹಾರ ಸಿಗಲಿದೆ.
ಇದು ಅಸಂಘಟಿತ ವಲಯದ ಗೃಹ ಕೆಲಸಗಳ ಕಾರ್ಮಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಮಹತ್ವದ್ದಾಗಲಿದ್ದು, ಇದರಿಂದ ನೋಂದಾಯಿತ ಗೃಹ ಕಾರ್ಮಿಕರು ಕನಿಷ್ಠ ವೇತನಕ್ಕೆ ಅರ್ಹರಾಗಿರಲಿದ್ದಾರೆ.




