Solar eclipse | 2025ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸುವುದಾಗಿ ಖಗೋಳಶಾಸ್ತ್ರಜ್ಞರು ಹೇಳಿದ್ದರು. ಎರಡು ಸೂರ್ಯಗ್ರಹಣಗಳು ಹಾಗೂ ಎರಡು ಚಂದ್ರಗ್ರಹಣಗಳು ಈ ವರ್ಷವಾಗಲಿವೆ ಎ೦ದು ಘೋಷಿಸಲಾಗಿತ್ತು. ಈಗಾಗಲೇ ಒ೦ದು ಸೂರ್ಯಗ್ರಹಣ ಮತ್ತು ಎರಡು ಚ೦ದ್ರಗ್ರಹಣಗಳು ನಡೆದಿದೆ. ಹಾಗಾದರೆ ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ? ಭಾರತದಲ್ಲಿ ಇದನ್ನು ಕಾಣಬಹುದೇ? ಈ ಕುರಿತ ಮಾಹಿತಿ ಇಲ್ಲಿದೆ.
ಸೂರ್ಯಗ್ರಹಣ
ಈ ವರ್ಷದ ಕೊನೆಯ ಸೂರ್ಯಗ್ರಹಣ 2025ರ ಸೆಪ್ಟೆಂಬರ್ 21, ಭಾನುವಾರ ಸಂಭವಿಸುತ್ತದೆ. ಆ ದಿನ ಅಮಾವಾಸ್ಯೆ ದಿನವಾಗಿದ್ದು, ಸರ್ವ ಪಿತೃ ಅಮಾವಾಸ್ಯೆಯೂ ಆಗಿರುತ್ತದೆ. ಇದರ ಮತ್ತೊಂದು ದಿನದಿಂದಲೇ ನವರಾತ್ರಿ ಹಬ್ಬ ಆರಂಭವಾಗಲಿದೆ. ಈ ಗ್ರಹಣ ಸಂಪೂರ್ಣ ಸೂರ್ಯಗ್ರಹಣವಾಗಿರುವುದಿಲ್ಲ. ಇದು ಭಾಗಿಕ ಸೂರ್ಯಗ್ರಹಣ. ಚಂದ್ರನು ಸೂರ್ಯನ ಒ೦ದು ಭಾಗವನ್ನು ಮಾತ್ರ ಮುಚ್ಚಲಿದೆ. ವಿಶೇಷವಾಗಿ ಭೂಮಿಯ ದಕ್ಷಿಣ ಅರ್ಧಗೋಳದ ಜನರಿಗೆ ಇದನ್ನು ನೋಡುವ ಅವಕಾಶ ದೊರೆಯಲಿದೆ.
ಭಾರತದಲ್ಲಿ ಕಾಣಬಹುದೇ?
ಈ ಸೂರ್ಯಗ್ರಹಣವನ್ನು ಭಾರತದಲ್ಲಿ ಕಾಣಲು ಸಾಧ್ಯವಿಲ್ಲ. ಭಾರತೀಯ ಕಾಲಮಾನ ಪ್ರಕಾರ ಇದು ಸೆಪ್ಟೆಂಬರ್ 21 ರಾತ್ರಿ 10:59ಕ್ಕೆ ಆರಂಭವಾಗಿ ಮುಂಜಾನೆ 3:23ರವರೆಗೆ ಮುಂದುವರಿಯಲಿದೆ. ಭಾರತದಲ್ಲಿ ರಾತ್ರಿ ವೇಳೆ ಇದು ಸಂಭವಿಸುವುದರಿಂದ ಇಲ್ಲಿ ಕಾಣಿಸುವುದಿಲ್ಲ.
ಜಾಗತಿಕ ಸಮಯ
ಯುನಿವರ್ಸಲ್ ಸಮಯ ಪ್ರಕಾರ ಈ ಘಟನೆ ಸಂಜೆ 5:29ಕ್ಕೆ ಆರಂಭವಾಗಿ, 7:41ಕ್ಕೆ ಉಚ್ಚವನ್ನು ತಲುಪುತ್ತದೆ. ಬಳಿಕ ರಾತ್ರಿ 9:53ಕ್ಕೆ ಅಂತ್ಯವಾಗುತ್ತದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಂಟಾರ್ಟಿಕಾ ಹಾಗೂ ದಕ್ಷಿಣ ಪ್ರಶಾಂತ ಮಹಾಸಾಗರದ ಬಳಿ ಇರುವ ಅನೇಕ ದ್ವೀಪಗಳಲ್ಲಿ ಇರುವವರು ಇದನ್ನು ನೇರವಾಗಿ ನೋಡಬಹುದು. ಸೂರ್ಯಗ್ರಹಣದಿಂದ ಭೂಮಿಯ ಅನೇಕ ಭಾಗಗಳು ಕತ್ತಲೆಯಿಂದ ಮುಳುಗುತ್ತವೆ.
ಎಚ್ಚರಿಕೆ
ಸೂರ್ಯಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಅತ್ಯಂತ ಅಪಾಯಕಾರಿ. ಸೂರ್ಯನನ್ನು ನೇರವಾಗಿ ನೋಡುವುದರಿಂದ ಕಣ್ಣಿನ ರೆಟಿನಾ ಹಾನಿಗೊಳಗಾಗಬಹುದು. ಇದನ್ನು ‘ಎಕ್ಲಿಪ್ಸ್ ಬ್ಲೆಂಡ್‌ನೆಸ್’ ಎ೦ದು ಕರೆಯಲಾಗುತ್ತದೆ. ಆದ್ದರಿಂದ ಇದಕ್ಕಾಗಿ ಪ್ರಮಾಣಿತ ಸುರಕ್ಷತಾ ಫಿಲ್ಟರ್‌ಗಳನ್ನು ಮಾತ್ರ ಬಳಸಬೇಕು ಎಂದು ಖಗೋಳಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.




