Benefits of carrot: ಮಕ್ಕಳಿಂದ ಹಿಡಿದು ಹಿರಿಯವರ ತನಕ ಎಲ್ಲರೂ ಸೇವಿಸಬಹುದಾದ ತರಕಾರಿ ಕ್ಯಾರೆಟ್(carrot). ಇದು ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು ತರಾವರಿ ಪೋಷಕಾಂಶಗಳಿಂದ ತುಂಬಿದೆ. ವಿಟಮಿನ್ ಎ, ಸಿ, ಕೆ ಮತ್ತು ಪೊಟ್ಯಾಶಿಯಂ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಕಿತ್ತಳೆ ಬಣ್ಣದ ಕ್ಯಾರೆಟ್ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ವಿರೋಧಿ
ಕ್ಯಾರೆಟ್ ಕ್ಯಾನ್ಸರ್ನಂತಹ ಕಾಯಿಲೆಯನ್ನು ದೂರವಿರಿಸುತ್ತದೆ. ವಿಶೇಷವಾಗಿ ಶ್ವಾಸಕೋಶ, ಸ್ತನ, ಕರುಳು, ಜಠರದ ಕ್ಯಾನ್ಸರ್ ವಿರುದ್ಧ ರಕ್ಷಣೆ ದೊರಕುತ್ತದೆ. ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ. ಇದರಲ್ಲಿರುವ ಕ್ಯಾರೊಟಿನಾಯ್ಡ್ ಮತ್ತು ಆಂಥೋಸಯಾನಿನ್ಗಳು ಕ್ಯಾನ್ಸರ್ ವಿರೋಧಿ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತವೆ.
ಹೃದಯಕ್ಕೆ ಒಳ್ಳೆಯದು
ಕ್ಯಾರೆಟ್ನಲ್ಲಿ ವಿಟಮಿನ್ ಎ, ಸಿ, ಕೆ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಹಾಗೂ ನಾರಿನಂಶವಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕ್ಯಾರೆಟ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯ೦ತ್ರಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡದಲ್ಲಿಯೂ ಕೂಡ ಏರುಪೇರಾಗದಂತೆ ತಡೆಯಲು ಕ್ಯಾರೆಟ್ ನೆರವಾಗುತ್ತದೆ.
ಕಣ್ಣಿನ ದೃಷ್ಟಿ
ದೇಹದಲ್ಲಿ ವಿಟಮಿನ್ ಎ ಕೊರತೆಯು ಕಣ್ಣುಗಳ ಸಮಸ್ಯೆಗೆ ಕಾರಣವಾಗಬಹುದು. ವಿಟಮಿನ್ ಎ ಅಂಶ ಹೆಚ್ಚಾಗಿರುವ ಕ್ಯಾರೆಟ್ ಸೇವನೆಯಿಂದ ಕಣ್ಣಿನ ದೃಷ್ಟಿ ಅಭಿವೃದ್ಧಿ ಆಗುವುದರ ಜೊತೆಗೆ ವಯಸ್ಸಾದ ಮೇಲೆ ಕ೦ಡುಬರುವ ಕಣ್ಣಿನ ಪೊರೆ ದೂರವಾಗಿ ರಾತ್ರಿ ಕುರುಡು ಸಮಸ್ಯೆ ಇಲ್ಲವಾಗುತ್ತದೆ. ಕಣ್ಣುಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಇತರ ಸಮಸ್ಯೆಗಳು ಕೂಡ ಇರುವುದಿಲ್ಲ.
ರೋಗನಿರೋಧಕ ಶಕ್ತಿ
ಕ್ಯಾರೆಟ್ನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಜೊತೆಗೆ ವಿಟಮಿನ್ ಸಿ ಅಧಿಕವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಸಾವಯವ ಸಂಯುಕ್ತಗಳು ದೇಹವನ್ನು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ.
ಆರೋಗ್ಯಕರ ಚರ್ಮ
ಯುವಿ ಕಿರಣಗಳು ಚರ್ಮದ ಮೇಲೆ ಹಾನಿಯುಂಟು ಮಾಡಿ ಒಣ ಚರ್ಮ, ಸುಕ್ಕು, ಪಿĄಂಟೇಶನ್ ಮುಂತಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಕ್ಯಾರೆಟ್ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಸೂರ್ಯನ ಕಿರಣಗಳಿಂದ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಣೆ ನೀಡುತ್ತದೆ.
ಜೀರ್ಣಕ್ರಿಯೆ
ಕ್ಯಾರೆಟ್ನಲ್ಲಿ ಫೈಬರ್ ಮತ್ತು ಕ್ಯಾರೊಟಿನಾಯ್ಡಗಳು ಅಧಿಕವಾಗಿವೆ. ಇವೆರಡೂ ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ. ಇದರಲ್ಲಿರುವ ನಾರಿನಂಶದಿಂದಾಗಿ ಅಜೀರ್ಣ, ಎದೆಯುರಿ, ಅಸಿಡಿಟಿ ಮುಂತಾದ ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳು ಗುಣವಾಗುತ್ತವೆ. ಕ್ಯಾರೆಟ್ ನಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.




