ನವದೆಹಲಿ: ದೇಶದಲ್ಲಿ ನಿಷೇಧಿಸಲಾಗಿದ್ದ ಜನಪ್ರಿಯ ಟಿಕ್ ಟಾಕ್ ಶೀಘ್ರದಲ್ಲೇ ರೀ ಎಂಟ್ರಿ ನೀಡಲಿದೆ. ಹೌದು ಟಿಕ್ ಟಾಕ್ ಉದ್ಯೋಗಿಗಳಿಗೆ ಮ್ಯಾನೇಜ್‌ಮೆಂಟ್ ಬರೆದ ಪತ್ರದಲ್ಲಿ ಇದನ್ನು ಸ್ಪಷ್ಟಪಡಿಸಿದೆ ಎನ್ನಲಾಗಿದೆ.
ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯ ಸಂಬಂಧ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಕಂಪನಿಯು ಬದ್ಧವಾಗಿದೆ ಎಂದು ಟಿಕ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಟಿಕ್ ಟಾಕ್ ಗೆ ಅಪಾರ ಬೆಳೆವಣಿಗೆಯ ಅವಕಾಶ ಎದುರುನೋಡುತ್ತಿದ್ದು, ಈಗಾಗಲೇ ಸರ್ಕಾರ ಎತ್ತಿದ ಆಕ್ಷೇಪಣೆಗಳ ಬಗ್ಗೆ ವಿವರಣೆಯನ್ನು ಸಲ್ಲಿಸಲಾಗಿದೆ ಎಂದು ನಿಖಿಲ್ ಗಾಂಧಿ ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ವೀಚಾಟ್, ಯುಸಿ ಬ್ರೌಸರ್ ಮತ್ತು ಇತರ 58 ಅಪ್ಲಿಕೇಶನ್‌ಗಳೊಂದಿಗೆ ಟಿಕ್‌ಟಾಕ್ ಅನ್ನು ಕೇಂದ್ರ ಸರ್ಕಾರವು ಜೂನ್‌ನಲ್ಲಿ ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾಗಿವೆ ಎಂದು ಸರ್ಕಾರ ತಿಳಿಸಿತ್ತು.