ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭರತನಾಟ್ಯ ಕಲಾವಿದೆ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಬೆಂಗಳೂರಿನ ಕನಕಪುರ ರಸ್ತೆಯ ರೆಸಾರ್ಟ್ನಲ್ಲಿ ವಿವಾಹವಾದರು. ಕುಟುಂಬದವರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು. ವಿವಾಹ ಸಮಾರಂಭ ಸೇರಿದಂತೆ ವಿವಾಹ ವಿಧಿವಿಧಾನಗಳು ಬುಧವಾರ ಸಂಜೆಯಿಂದ ನಡೆಯುತ್ತಿದ್ದವು. ಗುರುವಾರ ಬೆಳಿಗ್ಗೆ 10.45ಕ್ಕೆ ತುಲಾ ಲಗ್ನದಲ್ಲಿ ಶಿವಶ್ರೀ ಅವರ ಕುತ್ತಿಗೆಗೆ ಮಾಂಗಲ್ಯ ಧಾರಣೆಯೊಂದಿಗೆ ತೇಜಸ್ವಿ ಸೂರ್ಯ ಮದುವೆ ನೆರವೇರಿದೆ.
ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ B.Y.ವಿಜಯೇಂದ್ರ, ಸಂಸದರಾದ ಡಾ. ಮಂಜುನಾಥ, P.C.ಮೋಹನ್, ಬಿಜೆಪಿ ನಾಯಕ ಪ್ರತಾಪ್ ಸಿಂಹ ಮತ್ತು ಇತರ ಅನೇಕ ನಾಯಕರು ನವವಿವಾಹಿತರಿಗೆ ಶುಭ ಹಾರೈಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಾರ್ಚ್ 9 (ಭಾನುವಾರ)ರಂದು ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯ ಮತ್ತು ದೇಶದ ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.