ರಾಮನಗರ: ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸಿದ ಪೊಲೀಸರು ನೇಪಾಳ ಮೂಲದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೃತ ಕುಮಾರಿ(21) ಹಾಗೂ ಸುರೇಂದ್ರ ಮೆಹ್ರಾ(22) ಮಗುವನ್ನು ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿ ನಾಪತ್ತೆಯಾಗಿದ್ದ ಜೋಡಿಯಾಗಿದ್ದಾರೆ.
ಕಳೆದ ನವೆಂಬರ್ 24 ರಂದು ರಾಮನಗರದ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಯ ಶೌಚಾಲಯ ಬ್ಲಾಕ್ ಆಗಿದ್ದು, ಈ ವೇಳೆ ಪರಿಶೀಲನೆ ಮಾಡಿದಾಗ ಟಾಯ್ಲೆಟ್ನಲ್ಲಿ ನವಜಾತ ಶಿಶುವನ್ನು ಎಸೆದು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Shocking News: ಆಸ್ಪತ್ರೆ ಟಾಯ್ಲೆಟ್ನಲ್ಲಿ ನವಜಾತ ಶಿಶು ಎಸೆದು ಹೋದ ತಾಯಿ!
ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಈ ಸಂಬಂಧ ತೀವ್ರ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ನವಜಾತ ಶಿಶುವನ್ನು ಶೌಚಾಲಯದಲ್ಲಿ ಎಸೆದು ಹೋಗಿದ್ದ ನೇಪಾಳ ಮೂಲದ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿ ಯುವಕ ಹಾಗೂ ಯುವತಿ ಹಾರೋಹಳ್ಳಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಇಬ್ಬರೂ ಜೊತೆಗೆ ವಾಸವಾಗಿದ್ದರಾದರೂ ಮದುವೆಯಾಗಿರಲಿಲ್ಲ. ಈ ವೇಳೆ ಯುವತಿ ಗರ್ಭಿಣಿಯಾಗಿದ್ದು ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಯುವತಿ ಶೌಚಾಲಯಕ್ಕೆ ತೆರಳಿದ್ದು ಈ ವೇಳೆ ಮಗು ಜನಿಸಿದೆ. ಇದರಿಂದ ಗಾಬರಿಗೊಳಗಾದ ಈ ಜೋಡಿ ಮಗುವನ್ನು ಟಾಯ್ಲೆಟ್ನಲ್ಲಿ ಫ್ಲಶ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದ ಪರಾರಿಯಾಗಿದ್ದರು.