ಬೆಂಗಳೂರು: ಬೆಂಗಳೂರು ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಮೆಟ್ರೋ ಬ್ರಿಡ್ಜ್‌ನ ಸಿಮೆಂಟ್ ಬ್ರಿಕ್ಸ್ ಕಾರಿನ ಮೇಲೆ ಬಿದ್ದಿದ್ದು ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೈಸೂರು ರೋಡ್‌ನಲ್ಲಿ ಮೆಟ್ರೋ ಕಾಮಗಾರಿ ಭರದಿಂದ ಸಾಗಿದ್ದು ಈ ಮಾರ್ಗವಾಗಿ ಯಲಹಂಕದಿಂದ ನವೀನ್ ರಾಜ್ ಮತ್ತು ಕುಟುಂಬ ಮೈಸೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದರು. ಈ ವೇಳೆ ಪಿಲ್ಲರ್ ನಂಬರ್ 393-394 ನಡುವೆ ಮೆಟ್ರೋ ಬ್ರಿಡ್ಜ್ ನಿಂದ ಏಕಾಏಕಿ ಸಿಮೆಂಟ್ ಕಲ್ಲು ಕಳಚಿ ಬಿದ್ದಿದೆ.
ಇದರಿಂದ ನವೀನ್ ಅವರ ಎಸ್‌ಯುವಿ ಕಾರಿನ ಮುಂಬದಿ ಗಾಜು ಮತ್ತು ಮೇಲ್ಛಾವಣಿ ಡ್ಯಾಮೇಜ್ ಆಗಿದೆ. ಕಲ್ಲು ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಗಾಬರಿಯಾಗಿದ್ದಾರೆ.
ತಕ್ಷಣ ನವೀನ್ ಸಹೋದರ ನಾಗೇಂದ್ರ, ಮೆಟ್ರೋ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಮೆಟ್ರೋ ಸಿಬ್ಬಂದಿ ಹೆಡ್ ಆಫೀಸ್‌ಗೆ ಕರೆ ಮಾಡಿ, ಮೇಲ್ ಮಾಡಿ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.